ಬೆಂಗಳೂರು: ಟ್ರಸ್ಟ್ ಕಚೇರಿಯಿಂದ ದಾಖಲಾತಿ ಕಳ್ಳತನ ಆರೋಪ ಸಂಬಂಧ ಪ್ರತಿಷ್ಠಿತ ಅಲ್.ಅಮೀನ್ ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಎಂ.ಝಾಕೀರ್ರನ್ನು ಎಸ್‌ಜೆ ಪಾರ್ಕ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ದೂರುದಾರ ಡಾ.ಅಹ್ಮದ್ ಶರೀಫ್ ಸಿರಾಝ್ ನೀಡಿರುವ ದೂರಿನನ್ವಯ ಬಿ.ಎಂ.ಝಾಕೀರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 17ರಂದು ಇಲ್ಲಿನ ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆಗೆ ಆಯೇಷಾ ಅಮೀನಾ ಟ್ರಸ್ಟ್ ಕಾರ್ಯದರ್ಶಿ ಡಾ.ಅಹ್ಮದ್ ಶರೀಫ್ ಸಿರಾಝ್ ದೂರು ಸಲ್ಲಿಸಿದ್ದರು. ಟ್ರಸ್ಟಿಗಳಾದ ಸುಭಾನ್ ಶರೀಫ್ ಹಾಗೂ ಬಿ.ಎಂ.ಝಾಕೀರ್ ಟ್ರಸ್ಟಿನ ನಿಯಮಗಳನ್ನು ಉಲ್ಲಂಘಿಸಿ ಟ್ರಸ್ಟ್ಗೆ ಸಂಬಂಧಿಸಿದ ಓಟಿಸಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಖಾತೆಯಲ್ಲಿ ನಿಯಮ ಬಾಹಿರ ವ್ಯವಹಾರ ನಡೆಸಿದ್ದಾರೆ ಎಂದು ದೂರಿದ್ದರು.
ಮೀಟಿಂಗ್ ಮಿನಿಟ್ಸ್ ಪುಸ್ತಕ ಹಾಗೂ ಇನ್ನಿತರೆ ದಾಖಲಾತಿಗಳನ್ನು ಟ್ರಸ್ಟ್ ಕಚೇರಿಯಿಂದ ಕಳವು ಮಾಡಿ, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ವಂಚನೆಗೈದಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿ:
ಪ್ರಕರಣದ ಸಂಬಂಧ ತನಿಖೆ ನಡೆಸಿದ ಎಸ್.ಜೆ.ಪಾರ್ಕ್ ಠಾಣಾ ಪೊಲೀಸರು ಪ್ರಕರಣದ ಎರಡನೆಯ ಆರೋಪಿ ಅಲ್.ಅಮೀನ್ ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಎಂ.ಝಾಕೀರ್ ಅವರನ್ನು ಬಂಧಿಸಿದ್ದು, ಮತ್ತೋರ್ವ ಟ್ರಸ್ಟಿ ಸುಭಾನ್ ಶರೀಫ್ ತಲೆಮರೆಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಮುಂದುವರೆದ ತನಿಖೆ: ಆರೋಪಿಗಳ ವಿರುದ್ಧ ವಂಚನೆ, ಐಪಿಎಸ್ ಸೆಕ್ಷನ್ 379, 468, 471 ಅಡಿ ಮೊಕದ್ದಮೆ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ