ಬೆಂಗಳೂರು: ಭಾರಿ ಸಂಚಲನಕ್ಕೆ ಕಾರಣವಾಗಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ 2015) ವರದಿ ಮುಂದಿನ ತಿಂಗಳು ಸಲ್ಲಿಕೆಯಾಗಲಿದ್ದು, ಅದರ ಕೂಲಂಕಷ ಅಧ್ಯಯನಕ್ಕಾಗಿ ಸಂಪುಟ ಉಪಸಮಿತಿಯನ್ನು ರಚಿಸಲು ಸರ್ಕಾರ ಚಿಂತನೆ ನಡೆಸಿದೆ. ವರದಿ ಸಲ್ಲಿಸಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಿ ಗುಂಪುಗಳಲ್ಲಿರುವವರಿಗೆ ಹೆಚ್ಚುವರಿ ಸವಲತ್ತು: ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ರಾಜ್ಯದ ಜಾತಿವಾರು ಜನಸಂಖ್ಯೆಯನ್ನು ಒಟ್ಟಾಗಿ ಪರಿಗಣಿಸಿದ್ದು, ಇದರಿಂದ ಎಲ್ಲ ಜಾತಿಗಳಲ್ಲಿ ಸಬಲರು ಮತ್ತು ದುರ್ಬಲರನ್ನು ಒಂದೇ ನೆಲೆಯಲ್ಲಿ ನೋಡಿದಂತಾಗುತ್ತದೆ. ಹೀಗಾಗಿ ವರದಿಯಲ್ಲಿ ಉಲ್ಲೇಖವಾಗಿರುವ ಜಾತಿಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿ ಬಿ ಮತ್ತು ಸಿ ಗುಂಪುಗಳಲ್ಲಿರುವವರಿಗೆ ಹೆಚ್ಚುವರಿ ಸವಲತ್ತುಗಳನ್ನು ಕಲ್ಪಿಸಿಕೊಡುವುದು ಸೂಕ್ತ. ಉದಾಹರಣೆಗೆ ಪಂಚಮಸಾಲಿಗಳು, ನೊಣಬರು ಸೇರಿದಂತೆ ಎಲ್ಲರನ್ನೂ ಒಟ್ಟಾರೆಯಾಗಿ ಲಿಂಗಾಯತರು ಎಂದು ಪರಿಗಣಿಸಲಾಗಿದ್ದು, ಈ ಜಾತಿಗಳು ತಮಗೆ ಸಿಗಬೇಕಾದ ಸವಲತ್ತುಗಳಿಗಾಗಿ ಹೋರಾಟ ನಡೆಸುತ್ತಿವೆ.
ಹೀಗೆ ಎಲ್ಲ ಜಾತಿಗಳಲ್ಲೂ ಇಂತಹ ಪ್ರವರ್ಗಗಳಿದ್ದು, ಎಲ್ಲರನ್ನೂ ಒಂದೇ ನೆಲೆಯಲ್ಲಿ ನೋಡುವುದು ಸರಿಯಲ್ಲ ಎಂದು ಯೋಚಿಸಿರುವ ಸರ್ಕಾರ, ಇದೇ ಕಾರಣಕ್ಕಾಗಿ ಮುಂದಿನ ತಿಂಗಳು ಸಲ್ಲಿಕೆಯಾಗಲಿರುವ ವರದಿಯನ್ನು ಸಂಪುಟ ಉಪಸಮಿತಿಗೆ ಒಪ್ಪಿಸಲು ಚಿಂತನೆ ನಡೆಸಿದೆ. ರಚನೆಯಾಗಲಿರುವ ಸಂಪುಟ ಉಪಸಮಿತಿ ಹಲವು ಮಂದಿ ವಿಷಯ ತಜ್ಞರ ಬೆಂಬಲ ಪಡೆದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸುವ ವರದಿಯನ್ನು ಪರಿಶೀಲಿಸಿ ಆಯಾ ಜಾತಿಗಳ ಎ, ಬಿ, ಸಿ ಗುಂಪುಗಳನ್ನು ವರ್ಗೀಕರಿಸಿ, ನಂತರ ಕಷ್ಟದಲ್ಲಿರುವವರಿಗೆ ನೀಡಬೇಕಾದ ಸವಲತ್ತುಗಳ ಬಗ್ಗೆ ಶಿಫಾರಸು ನೀಡಲಿದೆ ಎಂದು ಮೂಲಗಳು ಹೇಳಿವೆ.
ಈ ಮಧ್ಯೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ-2015)ಯ ಮಂಡನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕೆಲವರು ಅಪಸ್ವರ ಎತ್ತಿದ್ದರೂ, ಮುಂದಿನ ತಿಂಗಳು ಮಂಡನೆಯಾಗಲಿರುವ ವರದಿಯನ್ನು ಸರ್ಕಾರ ಒಪ್ಪಿಕೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಸಲ್ಲಿಕೆ ಆಗಲಿರುವ ವರದಿಯಲ್ಲಿ ಜಾತಿಗಳನ್ನು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಇನ್ನಷ್ಟು ತಲಸ್ಪರ್ಶಿಯಾಗಿ ಗಮನಿಸಬೇಕಿದ್ದರೂ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಲಿರುವ ವರದಿಯ ಅಂಕಿ - ಅಂಶಗಳು ನಿಖರವಾಗಿವೆ. ಹೀಗಾಗಿ ಅದನ್ನು ಒಪ್ಪುವುದು ಅನಿವಾರ್ಯ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ’ಜಾತಿಗಣತಿ ಅಸಮರ್ಪಕವಾಗಿದೆ.. ಮತ್ತೆ ಪರಿಶೀಲಿಸುವ ಅಗತ್ಯವಿದೆ’: ಶಾಸಕ ರವಿಕುಮಾರ್ ಗಣಿಗ