ಬೆಂಗಳೂರು: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಭಾರತೀಯ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಕ್ರಮ ಕೈಗೊಂಡಿದೆ. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವ ಸಲಹೆ ನೀಡಬೇಕೇ ಹೊರತು ಸಿದ್ದರಾಮಯ್ಯ ಇತ್ಯಾದಿ ಜನರು ಬೀದಿಯಲ್ಲಿ ಕುಳಿತು ಬಾಯಿಗೆ ಬಂದಂತೆ ಹೇಳೋದಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಇಂಧನ ಸಚಿವ ಸುನೀಲ್ ಕುಮಾರ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಆಗುತ್ತಿದೆ. ಇಲ್ಲಿಯವರೆಗೂ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕರೆತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಯುದ್ಧದ ನೆಲದಿಂದ ಸುರಕ್ಷಿತವಾಗಿ ಕರೆತರುವುದು ಅಷ್ಟು ಸುಲಭವಲ್ಲ. ಹೀಗಿರುವಾಗ ಕೇಂದ್ರ ಸರ್ಕಾರ ಯಶಸ್ವಿಯಾಗಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುತ್ತಿದೆ. ಇಂತಹ ವಿಷಯಗಳಲ್ಲಿ ಸಲಹೆಗಳನ್ನು ಕೊಟ್ಟು, ವಿಪಕ್ಷಗಳು ಸರ್ಕಾರದ ಜೊತೆ ಒಟ್ಟಾಗಿ ನಿಲ್ಲಬೇಕೇ ಹೊರತು, ರಸ್ತೆಯಲ್ಲಿ ಕುಳಿತು ಸಿದ್ದರಾಮಯ್ಯ ಸೇರಿದಂತೆ ಇತರರು ರಾಜಕಾರಣ ಮಾಡುವುದು ಸರಿಯಲ್ಲ. ಉಕ್ರೇನ್ನಲ್ಲಿ ಯುದ್ಧದ ದಾಳಿಯಿಂದ ರಾಜ್ಯದ ವಿದ್ಯಾರ್ಥಿ ಸಾವು ಆಯ್ತು, ಇದು ಆಗಬಾರದಿತ್ತು. ಆದರೆ ಇನ್ಮುಂದೆ ಸಾವು-ನೋವು ಆಗದ ರೀತಿಯಲ್ಲಿ ಕೇಂದ್ರ ಎಚ್ಚರಿಕೆ ವಹಿಸಲಿದೆ ಎಂದರು.
ನಾಳೆ ಬಜೆಟ್: ಸಿಎಂ ಬೊಮ್ಮಾಯಿ ಅವರು ನಾಳೆ ತಮ್ಮ ಮೊದಲ ಬಜೆಟ್ ಮಂಡಿಸುತ್ತಿದ್ದಾರೆ. ಎಲ್ಲಾ ಇಲಾಖೆಯಿಂದ ಹೊಸ ಕಾರ್ಯಕ್ರಮ ನೀಡಲು, ಉತ್ತಮ ಸಲಹೆ ನೀಡಲಾಗಿದೆ. ದೂರದೃಷ್ಟಿ ಇಟ್ಟುಕೊಂಡಿರುವ ಮುಖ್ಯಮಂತ್ರಿಗಳು ನಾಡಿನ ಜನರ ಆಸೆ ಈಡೇರಿಸುತ್ತಾರೆ. ಕರ್ನಾಟಕದ ಮುಂದಿನ 10 ವರ್ಷದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಾಡಲಾಗುತ್ತಿದೆ. ಅನುಭವದ ಆಧಾರದ ಮೇಲೆ ಯೋಜನೆಗಳನ್ನು ಕೊಡುತ್ತಾರೆ. ರಾಜ್ಯಕ್ಕೆ ಏನು ಬೇಕಿದೆ ಎಂಬ ಸ್ಪಷ್ಟ ಕಲ್ಪನೆ ಇರುವ ಸಿಎಂ ನಮ್ಮ ನಾಡಿಗೆ ಸಿಕ್ಕಿರೋದು ನಮ್ಮ ಸೌಭಾಗ್ಯ. ನಾಳೆಯ ಬಜೆಟ್ ಆ ಎಲ್ಲಾ ನಿರೀಕ್ಷೆಗಳನ್ನು ಈಡೇರಿಸುತ್ತದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಇದನ್ನೂ ಓದಿ: ಉಕ್ರೇನ್ನಿಂದ ಜೀವಂತ ಇದ್ದವರನ್ನು ತರುವುದೇ ಕಷ್ಟ.. ಶವ ತರುವುದು ಕಠಿಣ: ಶಾಸಕ ಬೆಲ್ಲದ
ಮೇಕೆದಾಟು ವಿಚಾರದಲ್ಲಿ ಬದ್ಧತೆ ಇದೆ: ಕಾಂಗ್ರೆಸ್ ಅಧಿಕಾರದಲ್ಲಿದ್ದ ಐದು ವರ್ಷದಲ್ಲಿ ಮೇಕೆದಾಟು ಕುರಿತು ಡಿಪಿಆರ್ ಮಾಡಲಿಲ್ಲ. ಸಂಪೂರ್ಣ ಅಧಿಕಾರ, ಬಹುಮತ ಇತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಂದು ನೀರಾವರಿ ಸಚಿವರಾಗಿದ್ದರು, ಇಂದು ಅವರೇ ಪಾದಯಾತ್ರೆ ನೇತೃತ್ವ ವಹಿಸಿದ್ದಾರೆ. ರಾಜ್ಯದ ಹಿತ ಕಾಪಾಡುವ ಬಗ್ಗೆ ಅವರಿಗೆ ಅಧಿಕಾರದಲ್ಲಿದ್ದಾಗ ಅನಿಸಲೇ ಇಲ್ಲ. ನಾಲ್ಕು ವರ್ಷಗಳ ಕಾಲ ಅಸಹಾಯಕತೆ ತೋರಿದವರು ಈಗ ಪಾದಯಾತ್ರೆಗೆ ಹೊರಟಿದ್ದಾರೆ. ಮೊದಲ ಪಾದಯಾತ್ರೆಯಿಂದ ಕೊರೊನಾ ಜಾಸ್ತಿ ಮಾಡಿಸಿದರು. ಎರಡನೇ ಪಾದಯಾತ್ರೆಯಲ್ಲಿ ಟ್ರಾಫಿಕ್ ಜಾಮ್ ಹೆಚ್ಚಿಸುತ್ತಿದ್ದಾರೆ. ತಮ್ಮ ರಾಜಕೀಯ ಹಿತಾಸಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಮೇಕೆದಾಟು ವಿಚಾರದಲ್ಲಿ ಬಿಜೆಪಿಗೆ ಬದ್ಧತೆ ಇದೆ, ಇಂದು ನಾವು ಈ ವಿಚಾರದಲ್ಲಿ ಸ್ಪಷ್ಟವಿದ್ದೇವೆ. ನ್ಯಾಯಾಲಯದ ತೀರ್ಪು ನೋಡಿಕೊಂಡು ಮೇಕೆದಾಟು ಯೋಜನಗೆ ಬದ್ಧತೆ ತೋರುತ್ತೇವೆ ಎಂದು ಹೇಳಿದರು.