ಬೆಂಗಳೂರು : ರಾಜ್ಯದಲ್ಲಿ ಮೊದಲ ಹಾಗೂ 2ನೇ ಅಲೆ ಎಲ್ಲರ ಆರೋಗ್ಯ ಹಾಗೂ ದೈನಂದಿನ ಬದುಕಿನ ಮೇಲೆ ದಾಳಿ ಮಾಡಿದೆ. ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಕೋವಿಡ್ 2ನೇ ಅಲೆ ತೀವ್ರತೆ ಸದ್ಯ ಕಡಿಮೆ ಆಗ್ತಿದ್ದರೂ ಕೂಡ ಸೋಂಕಿನಿಂದ ಸಂಪೂರ್ಣ ಮುಕ್ತಿ ಸಿಕ್ಕಿಲ್ಲ. ಹೀಗಾಗಿ, ಕೊರೊನಾ ವಿರುದ್ಧದ ಹೋರಾಟಕ್ಕೆ ಲಸಿಕೆಯೇ ಪ್ರಾಥಮಿಕ ಮದ್ದಾಗಿದೆ. ಮೂರನೇ ಅಲೆ ಅಪ್ಪಳಿಸುವ ಮುನ್ನ ಲಸಿಕೆ ನೀಡಲು ಸರ್ಕಾರ ಹರಸಾಹಸ ಪಡುತ್ತಿದೆ.
ಈಗಾಗಲೇ ಲಸಿಕಾ ಉತ್ಸವ ಕಾರ್ಯಕ್ರಮದಲ್ಲಿ ಕಳೆದ ವಾರ ಒಂದೇ ದಿನ 10 ಲಕ್ಷ ಲಸಿಕೆ ನೀಡುವ ಗುರಿ ಇತ್ತು. ಆದರೆ, ಅದನ್ನೂ ಮೀರಿ 12 ಲಕ್ಷ ಲಸಿಕೆ ನೀಡಲಾಗಿತ್ತು. ನವೆಂಬರ್ನೊಳಗೆ ಲಸಿಕಾ ಅಭಿಯಾನ ಪೂರ್ಣ ಮಾಡುವತ್ತ ಸರ್ಕಾರ ಹೆಜ್ಜೆ ಇಟ್ಟಿದೆ. ದಿನಕ್ಕೆ 5 ಲಕ್ಷ ಲಸಿಕೆ ನೀಡುವ ಗುರಿ ಇದೆ. ಕಳೆದ ಆಗಸ್ಟ್ ತಿಂಗಳಲ್ಲಿ 1.12 ಕೋಟಿ ಡೋಸ್ ನೀಡಲಾಗಿದೆ.
ಲಸಿಕೆ ಪೂರ್ಣಗೊಳ್ಳದೆ ಹೋದರೆ ರೂಪಾಂತರಿ ಭೀತಿ
ಮೂರನೆ ಅಲೆಯೊಂದಿಗೆ ರೂಪಾಂತರಿ ಭೀತಿಯೂ ಇದೆ. ಇದನ್ನ ಎದುರಿಸಲು ಲಸಿಕೆ ಪೂರ್ಣಗೊಳ್ಳುವುದು ಅನಿವಾರ್ಯ. ಕೊರೊನಾ ಬರುವುದನ್ನ ತಡೆಯಲು ಅಸಾಧ್ಯವಾದರೂ ರೋಗದ ತೀವ್ರತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಲಸಿಕೆ ಅತ್ಯಗತ್ಯ. ಈಗಾಗಲೇ ಡೆಲ್ಟಾ, ಅಲ್ಫಾ, ಕಪ್ಪಾ, ಬೇಟಾ, ಡೆಲ್ಟಾ ಪ್ಲಸ್, ಈಟಾ ದಂತಹ 6 ಬಗೆಯ ರೂಪಾಂತರಿ ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿ ಲಾಕ್ಡೌನ್ಗೆ ಮುಕ್ತಿ ನೀಡಲಾಗಿದೆ. ಆದರೆ, ಜನರು ತಮ್ಮ ನಿತ್ಯದ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕೇರಳದಲ್ಲಿ ಸೋಂಕು ತೀವ್ರತೆ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಓಡಾಟವೂ ಹೆಚ್ಚಾಗಿದೆ. ಹೀಗಾಗಿ, ಈ ಮೂಲಗಳಿಂದ ಕೊರೊನಾ ಹಾಗೂ ರೂಪಾಂತರಿ ಆವರಿಸುವ ಸಾಧ್ಯತೆ ಇರುವುದರಿಂದ ಮೂರನೇ ಅಲೆಗೆ ಇವುಗಳೇ ಕಾರಣವಾಗಬಹುದು. ಹೀಗಾಗಿ, ಅಷ್ಟರೊಳಗೆ ಪ್ರತಿಯೊಬ್ಬರಿಗೂ ಮೊದಲ ಡೋಸ್ ಲಸಿಕೆಯನ್ನಾದರೂ ನೀಡುವ ಪ್ರಯತ್ನವನ್ನ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮಾಡುತ್ತಿದೆ.
ಲಸಿಕಾ ಮಾಹಿತಿ
ಫಸ್ಟ್ ಡೋಸ್
ಆರೋಗ್ಯ ಕಾರ್ಯಕರ್ತರು- 7,62,877 ಮಂದಿ
ಮುಂಚೂಣಿ ಕಾರ್ಯತರು- 9,38,156 ಮಂದಿ
18-44 ವರ್ಷದೊಳಗಿನವರು-1,88,88,466ಮಂದಿ
45 ವರ್ಷ ಮೇಲ್ಪಟ್ಟವರು-14,91,7059 ಮಂದಿ
ಸೆಕೆಂಡ್ ಡೋಸ್
ಆರೋಗ್ಯ ಕಾರ್ಯಕರ್ತರು-6,26,258 ಮಂದಿ
ಮುಂಚೂಣಿ ಕಾರ್ಯತರು-3,37,617 ಮಂದಿ
18-44 ವರ್ಷದೊಳಗಿನವರು-34,64,549 ಮಂದಿ
45 ವರ್ಷ ಮೇಲ್ಪಟ್ಟವರು-79,52,990 ಮಂದಿ
ಒಟ್ಟಾರೆ, 4,81,47,338 ಮಂದಿ ಮೊದಲ ಹಾಗೂ ಎರಡನೇ ಡೋಸ್ ಲಸಿಕೆಯನ್ನ ಪಡೆದುಕೊಂಡಿದ್ದಾರೆ.
ಶುಕ್ರವಾರ ಮೋದಿ ಹುಟ್ಟಹುಬ್ಬ-ಮೆಗಾ ಲಸಿಕಾ ಮೇಳಕ್ಕೆ ಪ್ಲಾನ್
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬ ಹಿನ್ನೆಲೆ ಕೋವಿಡ್ ಲಸಿಕಾ ಮೇಳ ಆಯೋಜನೆಗೆ ಸಿದ್ಧತೆ ನಡೆದಿದೆ. ಅಂದು 30 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಅದರಲ್ಲೂ ಮೊದಲ ಡೋಸ್ ಅನ್ನು ಪಡೆಯದೇ ಇರುವ ವರ್ಗವನ್ನ ಗಮನದಲ್ಲಿಟ್ಟುಕೊಳ್ಳಲಾಗಿದೆ. ಲಸಿಕೆಯಿಂದ ದೂರ ಉಳಿದ ವರ್ಗವೇ ಒಂದೂವರೆ ಕೋಟಿಯಷ್ಟಿದೆ. ಎಲ್ಲವೂ ಅಂದುಕೊಂಡಂತೆ ಗುರಿ ತಲುಪಿದರೆ ಒಂದೇ ದಿನದಲ್ಲಿ ದೇಶದಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯವಾಗಿ ಕರ್ನಾಟಕ ಹೆಸರು ಮಾಡಲಿದೆ.
10 ಸಾವಿರ ಲಸಿಕಾ ಕೇಂದ್ರ ತೆರಯಲು ಪ್ಲಾನ್
ಆ ದಿನದಂದು 10 ಸಾವಿರ ಲಸಿಕಾ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. ಇದಕ್ಕೆ ಬೇಕಿರುವ ಲಸಿಕಾ ದಾಸ್ತಾನು, ಸಿಬ್ಬಂದಿ, ಕೇಂದ್ರಗಳ ಸಿದ್ಧತೆ ಮಾಡಿಕೊಳ್ತಿದೆ. ಇಂದು 5 ಹಾಗೂ ನಾಳೆ 10 ಲಕ್ಷ ಡೋಸ್ ದಾಸ್ತಾನು ಬರಲಿದೆ. ಲಸಿಕೆ ಕೊರತೆಯು ಉಂಟಾಗುವುದಿಲ್ಲ ಎನ್ನಲಾಗುತ್ತಿದೆ. ಮೋದಿ ಹೆಸರಲ್ಲಿ ಇತ್ತ ಬೃಹತ್ ಲಸಿಕಾ ಮೇಳ ಆಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಜನರ ಸಹಕಾರ ಹೇಗೆ ಇರಲಿದೆ ಎಂಬುದನ್ನ ಕಾದು ನೋಡಬೇಕಿದೆ.
ಓದಿ: ದೇವಾಲಯ ತೆರವು ವಿವಾದ : ಹುಚ್ಚಗಣಿ ಗ್ರಾಮದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ