ಬೆಂಗಳೂರು: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರತ್ಯೇಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶಿಸಿದೆ.
ನಿಗಮಕ್ಕೆ 08 ಹುದ್ದೆಗಳನ್ನು ಸೃಜಿಸಲಾಗಿದೆ. ಒಬ್ಬ ವ್ಯವಸ್ಥಾಪಕ ನಿರ್ದೇಶಕರು, ಓರ್ವ ಕಂಪನಿ ಸೆಕ್ರೇಟರಿ (Retainership), ಓರ್ವ ಲೆಕ್ಕಾಧಿಕಾರಿ, ಓರ್ವ ಪ್ರಥಮ ದರ್ಜೆ ಸಹಾಯಕರು, ಇಬ್ಬರು ಡಾಟಾ ಎಂಟ್ರಿ ಆಪರೇಟರ್, ಓರ್ವ ವಾಹನ ಚಾಲಕ, ಓರ್ವ ಗ್ರೂಪ್ D ಸಿಬ್ಬಂದಿ ಒಳಗೊಂಡಿರಲಿದೆ. ಪರಿಶಿಷ್ಟ ವರ್ಗಗಳಲ್ಲಿ ಗುರುತಿಸಿರುವ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಅನುಷ್ಟಾನಗೊಳಿಸುತ್ತಿದ್ದ ಕಾರ್ಯಕ್ರಮಗಳನ್ನು, ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮಕ್ಕೆ ಸೇರ್ಪಡೆ ಮಾಡಿ, ಸೌಲಭ್ಯಗಳನ್ನು ಕಲ್ಪಿಸುವಂತೆ ಆದೇಶಿಸಲಾಗಿತ್ತು.
ಅದರಂತೆ, 2019-20ನೇ ಸಾಲಿನಿಂದ ಪರಿಶಿಷ್ಟ ವರ್ಗಕ್ಕೆ ಸೇರಿದ ಅಲೆಮಾರಿ ಸಮುದಾಯಗಳ ಯೋಜನೆಗಳನ್ನು ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ಧಿ ಕೋಶ ಎಂಡಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಿಗೆ ಪತ್ರ ಬರೆದು, ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಲ್ಲಿರುವ ಯೋಜನೆಗಳನ್ನು ಬಳಸಿಕೊಂಡು ಶೈಕ್ಷಣಿಕ ಸಾಮಾಜಿಕ ಮತ್ತು ಆರ್ಥಿಕ ನೆರವನ್ನು ಪಡೆಯಲು ಅನುಕೂಲವಾಗುವಂತೆ ಭಾರತ ಸರ್ಕಾರದ ಮಾದರಿಯಲ್ಲಿ ನಿಗಮವನ್ನು ಸ್ಥಾಪಿಸಲು ಸೂಚಿಸಿದ್ದರು.
2011ರ ಜನ ಗಣತಿಯ ಪ್ರಕಾರ ಪರಿಶಿಷ್ಟ ಜಾತಿಯ ಅಲೆಮಾರಿ 6,65,377 ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 3,25,807 ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಒಟ್ಟು ಜನಸಂಖ್ಯೆ 9,91,184 ರಷ್ಟಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಲೆಮಾರಿ ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸವಲತ್ತುಗಳನ್ನು ರಾಜ್ಯ ಸರ್ಕಾರದಿಂದ ಒದಗಿಸಲು ಹಾಗೂ ಕೇಂದ್ರ ಸರ್ಕಾರದ The Development and Welfare Board for De-notified, Nomadic and semi Nomadic Communities ಮಾದರಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುವಂತೆ ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪನೆ ಮಾಡಲು ಅನುಮತಿಯನ್ನು ನೀಡಿ ಆದೇಶವನ್ನು ಹೊರಡಿಸಬೇಕೆಂದು ಕೋರಿದ್ದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ಗೆ ಭಯೋತ್ಪಾದಕರೇ ಬ್ರದರ್ಸ್: ರಾಜ್ಯ ಬಿಜೆಪಿ ಟ್ವೀಟ್