ಬೆಂಗಳೂರು: 2022-23ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಸದರಿ ಆದೇಶದನ್ವಯ ಸರ್ಕಾರಿ ನೌಕರರ ವರ್ಗಾವಣೆಗಳನ್ನು ದಿನಾಂಕ 01.05.2022 ರಿಂದ 15,06,2022 ರವರೆಗೆ ಮಾಡಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ. ಪ್ರಸ್ತುತ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣಾ ಅವಧಿಯು ಮುಕ್ತಾಯಗೊಂಡಿದೆ.
ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿ:ವರ್ಗಾವಣಾ ಅವಧಿ ಮುಗಿದ ನಂತರ, ಕೆಲವೊಂದು ವಿರಳ ಸಂದರ್ಭಗಳಲ್ಲಿ ಮಾತ್ರ ಮುಖ್ಯಮಂತ್ರಿಯವರ ಅನುಮೋದನೆ ಪಡೆದು ವರ್ಗಾವಣೆಗಳನ್ನು ಮಾಡಲಾಗುತ್ತಿದೆ. ಭಾರತೀಯ ಚುನಾವಣಾ ಆಯೋಗವು ದಿನಾಕ 08.12.2022 ರಂದು ರಾಜ್ಯ ಸರ್ಕಾರಕ್ಕೆ ಬರದಿರುವ ಪತ್ರದಲ್ಲಿ ಕರ್ನಾಟಕ ವಿಧಾನ ಸಭೆಗೆ 2023 ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ಹಿನ್ನಲೆಯಲ್ಲಿ ಅಧಿಕಾರಿ ಅಥವಾ ಸಿಬ್ಬಂದಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿಗಳನ್ನು ನೀಡಿರುತ್ತದೆ. ಮುಂದುವರಿದು, ಈ ಮಾರ್ಗಸೂಚಿಗಳ ಅನುಸಾರ ಕ್ರಮವಹಿಸಿ ಆಯೋಗಕ್ಕೆ ದಿನಾಂಕ 31.01,2023 ರ ಒಳಗಾಗಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿರುತ್ತದೆ.
ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಅನುಸರಿಸುವಂತೆ ಸೂಚನೆ: ಕಾಲಮಿತಿಯಲ್ಲಿ ಈ ವರ್ಗಾವಣೆ ಸ್ಥಳನಿಯುಕ್ತಿಗಳನ್ನು ಮಾಡಬೇಕಿರುವುದರಿಂದ, ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚನೆಗಳ ಅನುಸಾರ ದಿನಾಂಕ 31.01.2023ರ ಒಳಗಾಗಿ ವರ್ಗಾವಣೆ ಮತ್ತು ಸ್ಥಳನಿಯುಕ್ತಿಗೊಳಿಸುವ ಅಧಿಕಾರವನ್ನು ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣಾ ಅವಧಿಯಲ್ಲಿ ಯಾವ ನಿರ್ದಿಷ್ಟ ಪ್ರಾಧಿಕಾರಗಳ ವರ್ಗಾವಣೆಯನ್ನು ಕೈಗೊಳ್ಳುತ್ತಿದ್ದರೋ ಅವರಿಗೇ ಪ್ರತ್ಯಾಯೋಜಿಸಿ ಆದೇಶಿಸಲಾಗಿದೆ.
ಈ ವರ್ಗಾವಣೆಗಳನ್ನು ಸಂಪೂರ್ಣವಾಗಿ ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳ ಅನುಸಾರ ಕೈಗೊಳ್ಳಲಾಗಿರುತ್ತದೆ ಎಂದು ಸಂಬಂಧಿಸಿದ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ಪ್ರಮಾಣೀಕರಿಸುವುದು. ಈ ಮೇಲ್ಕಂಡ ಅಂಶಗಳನ್ನು ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಅನುಸರಿಸುವಂತೆ ಸೂಚಿಸಲಾಗಿದೆ.
13 ಐಪಿಎಸ್ ಅಧಿಕಾರಿಗಳು ಸೇರಿದಂತೆ 74 ಡಿವೈಎಸ್ಪಿಗಳ ವರ್ಗಾವಣೆ:ರಾಜ್ಯ ಚುನಾವಣೆ ಮಾರ್ಗಸೂಚಿಯಂತೆ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದ್ದು, 13 ಐಪಿಎಸ್ ಅಧಿಕಾರಿಗಳು ಹಾಗೂ 74 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪ ಬರುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಆಯೋಗದ ನಿರ್ದೇಶನದಂತೆ ಐಪಿಎಸ್ ಅಧಿಕಾರಿಗಳು ಹಾಗೂ ಡಿವೈಎಸ್ಪಿಗಳನ್ನು ವರ್ಗಾವನೆ ಮಾಡಲಾಗಿದೆ.
ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು: ಕಾರ್ತಿಕ್ ರೆಡ್ಡಿ - ರಾಮನಗರ ಎಸ್ಪಿ, ವಿನಾಯಕ್ ಪಾಟೀಲ್ - ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಪೊಲೀಸ್ ಜನರಲ್, ಸಂತೋಷ್ ಬಾಬು - ಇಂಟೆಲಿಜೆನ್ಸ್. ದೇವರಾಜ್ - ಉತ್ತರ ವಿಭಾಗ ಬೆಂಗಳೂರು ನಗರ, ಸಿರಿಗೌರಿ - ಇಂಟರ್ನಲ್ ಸೆಕ್ಯೂರಿಟಿ ಡಿವಿಷನ್ (ಐಎಸ್ ಡಿ) ಟಿ.ಪಿ ಶಿವಕುಮಾರ್ - ಕೆಪಿಟಿಸಿಎಲ್, ಶೇಖರ್ ಎಚ್ - ಎಸ್ಪಿ, ಕಾನೂನು ಸುವ್ಯವಸ್ಥೆ ಬೆಳಗಾವಿ ಸಿಟಿ. ಪದ್ಮಿನಿ ಸಾಹೋ - ಚಾಮರಾಜನಗರ ಎಸ್ಪಿ, ಪ್ರದೀಪ್ ಗುಂಟಿ - ಕಾರಾಗೃಹ ಇಲಾಖೆ, ಗೀತಾ ಎಂ. ಎಸ್ - ಟ್ರೈನಿಂಗ್ ಸ್ಕೂಲ್ ಮೈಸೂರು. ರಾಮರಾಜನ್ - ಕೊಡಗು - ಮಡಿಕೇರಿ ಎಸ್ಪಿ, ರವೀಂದ್ರ ಕಾಶಿನಾಥ್ - ಕಮ್ಯಾಂಡ್ ಸೆಂಟರ್ ಬೆಂಗಳೂರು ನಗರ ಹಾಗೂ ಅಯ್ಯಪ್ಪ ಎಂ. ಎ. ಇಂಟೆಲಿಜೆನ್ಸ್- ಈ ವಿಭಾಗಗಳಿಂದ ಇಷ್ಟು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ:ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ತಾತ್ಕಾಲಿಕ ಪಟ್ಟಿ ರದ್ದುಗೊಳಿಸಿದ ಹೈಕೋರ್ಟ್