ಬೆಂಗಳೂರು: ಹಸಿರು ವಲಯದ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಕೊರೊನಾರಹಿತ ಜಿಲ್ಲೆಗಳಾದ ಚಾಮರಾಜನಗರ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ರಾಮನಗರ, ಕೊಪ್ಪಳ, ಚಿಕ್ಕಮಗಳೂರು, ಹಾಸನ, ರಾಯಚೂರು, ಯಾದಗಿರಿ, ಕೋಲಾರ, ಉಡುಪಿ, ಕೊಡಗು ಮತ್ತು ದಾವಣಗೆರೆಯಲ್ಲಿ ಲಾಕ್ಡೌನ್ನಲ್ಲಿ ಮತ್ತಷ್ಟು ಸಡಿಲಿಕೆ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಮಹಾನಗರ ಪಾಲಿಕೆಯ ಹೊರಗಿರುವ ಎಲ್ಲಾ ಅಂಗಡಿ ಮುಂಗಟ್ಟುಗಳು, ವಸತಿ ಸಮ್ಮುಚ್ಚಯ ಹಾಗೂ ಮಾರುಕಟ್ಟೆ ಕಾಂಪ್ಲೆಕ್ಸ್ಗಳಲ್ಲಿರುವ ಅಂಗಡಿಗಳು 50% ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಮಾಸ್ಕ್ ಮತ್ತು ಸಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಮಾಲ್ಗಳಲ್ಲಿನ ಅಂಗಡಿ ಮುಂಗಟ್ಟುಗಳ ಕಾರ್ಯನಿರ್ವಹಣೆಯನ್ನು ನಿಷೇಧಿಸಲಾಗಿದೆ. ಅದೇ ರೀತಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಅಂಗಡಿಗಳು, ಒಂಟಿ ಅಂಗಡಿಗಳು, ವಸತಿ ಸಮುಚ್ಚಯದ ಒಳಗಡೆ ಇರುವ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ.
ಇಲ್ಲೂ 50% ಸಿಬ್ಬಂದಿ, ಮಾಸ್ಕ್, ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಮಾಲ್ಗಳು, ಮಲ್ಟಿ ಬ್ರಾಂಡ್ ಮಾಲ್ಗಳು, ಮಾರುಕಟ್ಟೆ ಸಮ್ಮುಚ್ಚಯದಲ್ಲಿನ ಅಂಗಡಿಗಳಿಗೆ ಅನುಮತಿ ನೀಡಲಾಗಿಲ್ಲ. ಇನ್ನು ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಗದಗ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳಲ್ಲಿ ಸಕ್ರಿಯ ಕೊರೊನಾ ಸೋಂಕು ಇಲ್ಲದ ತಾಲೂಕುಗಳಲ್ಲಿ ಅಂಗಡಿ ಮುಂಗಟ್ಟು, ಕೈಗಾರಿಕೆಗಳಿಗೆ ಅನುಮತಿ ನೀಡುವ ನಿರ್ಧಾರವನ್ನು ಉಸ್ತುವಾರಿ ಸಚಿವರು ತೆಗೆದುಕೊಳ್ಳಲಿದ್ದಾರೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಉಳಿದಂತೆ ಕೊರೊನಾ ಕೆಂಪು ವಲಯ ಜಿಲ್ಲೆಗಳಾದ ಬೆಂಗಳೂರು ನಗರ, ದಕ್ಷಿಣ ಕನ್ನಡ, ಕಲಬುರಗಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಮೈಸೂರು, ಬೀದರ್ನಲ್ಲಿ ಈ ಮೇಲಿನ ವಿನಾಯಿತಿಗಳು ಇರುವುದಿಲ್ಲ. ಈಗಿರುವ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಸೂಚಿಸಲಾಗಿದೆ.