ಬೆಂಗಳೂರು: ಬಿಜೆಪಿ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸುವ ಬಗ್ಗೆ ಆಲೋಚಿಸಿಲ್ಲ. ಆದರೆ, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಯಿಂದ ಸರ್ಕಾರಕ್ಕೆ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಿಂಗಾಪುರ ಕಾರ್ಯತಂತ್ರದ ಕಥೆ ಹೇಳಿದ್ದಾರೆ ಎಂದು ಮಾಜಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಆರ್.ಟಿ ನಗರದ ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ದಿನದಿಂದಲೇ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಸ್ಪಷ್ಟ ಬಹುಮತ ಇದ್ದರೂ ಮುಖ್ಯಮಂತ್ರಿ ಆಯ್ಕೆ ಮಾಡಿರುವ ವಿಧಾನ, ಸೀಕ್ರೆಟ್ ಬ್ಯಾಲೆಟ್ ಬಳಕೆ, ಬಹುಮತ ಇದ್ದರೂ ಇಷ್ಟು ಸರ್ಕಸ್ ಮಾಡಿರುವುದನ್ನು ನೋಡಿದರೆ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಅರ್ಥವಾಗುತ್ತದೆ ಎಂದು ಟೀಕಿಸಿದರು.
ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಅನುದಾನ ಕಡಿತ : ಈ ಸರ್ಕಾರಕ್ಕೆ ಗ್ಯಾರಂಟಿ ಬಿಟ್ಟು ಬೇರೆ ಯಾವುದಕ್ಕೂ ಆದ್ಯತೆ ನೀಡಲಾಗುತ್ತಿಲ್ಲ. ಸಿದ್ದರಾಮಯ್ಯ ಗ್ಯಾರಂಟಿಗಳಿಗೆ ಹಣ ನೀಡುವ ಸಲುವಾಗಿ ಅಭಿವೃದ್ಧಿಗೆ ಅನುದಾನ ಇಲ್ಲ ಅಂತ ಹೇಳಿದ್ದಾರೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಶಾಸಕರೇ ವರ್ಗಾವಣೆ ದಂಧೆ ಕುರಿತು ಬಹಿರಂಗವಾಗಿಯೇ ಹೇಳಿದ್ದಾರೆ. ಸಚಿವರುಗಳ ವಿರುದ್ದ ಅಸಮಾಧಾನವನ್ನೂ ಹೊರ ಹಾಕಿದ್ದಾರೆ. ಇದೇ ಸರ್ಕಾರ ಹೇಗೆ ನಡೆಯುತ್ತಿದೆ ಎನ್ನುವುದಕ್ಕೆ ನಿದರ್ಶನ ಎಂದು ಬೊಮ್ಮಾಯಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಡ್ಯಾಮೇಜ್ ಕಂಟ್ರೊಲ್‌ಗೆ ಸಿಂಗಾಪುರ ಕಥೆ: ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವುದೂ ಗೊತ್ತು, ಕೆಳಗೆ ಇಳಿಸುವುದೂ ಗೊತ್ತು ಎಂದು ನೀಡಿದ್ದ ಹೇಳಿಕೆಯಿಂದ ಆಗಿರುವ ಡ್ಯಾಮೆಜ್ ಕಂಟ್ರೋಲ್ ಮಾಡಲು ಡಿಸಿಎಂ ಡಿ ಕೆ ಶಿವಕುಮಾರ್ ಸಿಂಗಾಪುರ ತಂತ್ರದ ಬಗ್ಗೆ ಹೇಳಿದ್ದಾರೆ. ಸ್ವತಃ ಅವರು ಮುಂದೆ ತಾವು ಮಾಡುವ ಕಾರ್ಯತಂತ್ರದ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಇದು ಅವರಲ್ಲಿಯೆ ಸಮಾಧಾನ ಇಲ್ಲ ಎನ್ನುವುದನ್ನು ಈ ಮೂಲಕ ತೋರಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ಮಾತಿನ ಬಾಣ ಬಿಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಇರುವುದು ಸತ್ಯ: ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನುವುದು ಸತ್ಯ. ಡಿ ಕೆ ಶಿವಕುಮಾರ್ ಸರ್ಕಾರದ ಅಸ್ಥಿರತೆಯ ಬಗ್ಗೆ ಎರಡು ಬಾರಿ ಬಹಿರಂಗವಾಗಿ ಹೇಳಿಕೆ ನೀಡಿದರೂ, ಸಿಎಂಗೆ ಇದರ ಬಗ್ಗೆ ಮಾಹಿತಿ ಇಲ್ಲ ಎಂದರೆ ಇಬ್ಬರ ನಡುವೆ ಹೊಂದಾಣಿಕೆ ಇಲ್ಲ ಎಂದೇ ಅರ್ಥವಲ್ಲವೇ? ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಜೈನ ಮುನಿ ಹತ್ಯೆಯಿಂದ ಹಿಡಿದು ನಿತ್ಯ ಕೊಲೆ ನಡೆಯುತ್ತಿವೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರದ ವರದಿಗಳಾಗುತ್ತಿವೆ. ನ್ಯಾಯಾಧೀಶರಿಗೆ ಅಂತಾರಾಷ್ಟ್ರೀಯ ಮಟ್ಟದ ಕೊಲೆ ಬೆದರಿಕೆ ಬರುತ್ತಿದೆ. ಹೀಗಾಗದರೆ ಇವರು ಯಾರಿಗೆ ರಕ್ಷಣೆ ನೀಡುತ್ತಾರೆ ಎಂದು ಸಿದ್ದರಾಮಯ್ಯ ಸರ್ಕಾರವನ್ನ ಟೀಕಿಸಿದ್ದಾರೆ.
ನೈಸ್ ಅಕ್ರಮದ ಕುರಿತು ಮಾತನಾಡಿದ ಮಾಜಿ ಸಿಎಂ, ನೈಸ್ ಅಕ್ರಮದ ಬಗ್ಗೆ ಈಗಾಗಲೇ ಸದನ ಸಮಿತಿ ನೀಡಿರುವ ವರದಿ ಆಧರಿಸಿ ಹೆಚ್ಚುವರಿ ಜಮೀನನ್ನು ಸರ್ಕಾರ ಮರು ವಶಪಡಿಸಿಕೊಳ್ಳಬೇಕು ಅಂತ ಆಗ್ರಹಿಸಿದ್ದೇವೆ. ಅಲ್ಲದೇ ಹೆಚ್ಚಿಗೆ ಸಂಗ್ರಹಿಸಿರುವ ಟೋಲ್ ಹಣವನ್ನೂ ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸುವುದಾಗಿ ಮಾಜಿ ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂಓದಿ: ಜೆಡಿಎಸ್ - ಬಿಜೆಪಿ ಮೈತ್ರಿ ಊಹಾಪೋಹಕ್ಕೆ ತೆರೆ ಎಳೆದ ದೇವೇಗೌಡರು