ಬೆಳಗಾವಿ (ಬೆಂಗಳೂರು): ಮೇಕೆದಾಟು ಯೋಜನೆಗೆ ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯ ತಿರುವಳಿ/ಅನುಮೋದನೆ ಪಡೆದು ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ,ನಮ್ಮ ನೀರು ಪಡೆಯುವುದು ನಮ್ಮ ಹಕ್ಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ತಮಿಳುನಾಡಿಗೆ ಹರಿದ 10.658 ಟಿಎಂಸಿ ನೀರು : ವಿಧಾನಪರಿಷತ್‌ನಲ್ಲಿ ಸದಸ್ಯ ಶರವಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಮೇಕೆದಾಟು ಯೋಜನೆಗೆ ಇದುವರೆಗೆ ಯಾವುದೇ ಭೂಮಿಯನ್ನು ವಶಪಡಿಸಿಕೊಂಡಿರುವುದಿಲ್ಲ. ಕರ್ನಾಟಕ ಮತ್ತು ತಮಿಳುನಾಡು ಅಂತರ ರಾಜ್ಯ ಗಡಿಯಲ್ಲಿರುವ ಸಿಡಬ್ಲ್ಯುಸಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಜುಲೈ 2023 ರಿಂದ ನವೆಂಬರ್ 2023 ರ ವರೆಗೆ 10.658 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ.
ಸಂಕಷ್ಟ ಜಲ ವರ್ಷಗಳಲ್ಲಿ ನೀರಿನ ಹಂಚಿಕೆ ಕುರಿತು ಸೂತ್ರ ರೂಪಿಸುವ ಬಗ್ಗೆ ಕಾವೇರಿ ಜಲ ನಿಯಂತ್ರಣಾ ಸಮಿತಿಯ (CWRC)/ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ (CWMA) ಸಭೆಗಳಲ್ಲಿ ಚರ್ಚಿಸಲಾಗುತ್ತಿದ್ದು, ಸಂಕಷ್ಟ ಹಂಚಿಕೆ ಸೂತ್ರವು ಅಂತಿಮವಾಗಬೇಕಿದೆ ಎಂದು ಸ್ಪಷ್ಟಪಡಿಸಿದರು.
ಪ್ರಸ್ತುತ, ಜಲವರ್ಷ 2023-24 ಆರಂಭದಿಂದಲೂ ಸಂಕಷ್ಟ ಜಲ ವರ್ಷವಾಗಿದೆ. CWRC ಹಾಗೂ CWMA ಸಭೆಗಳಲ್ಲಿ ಕಾವೇರಿ ಜಲಾನಯನಗಳ ಜಲಾಶಯಗಳಲ್ಲಿ ಕಳೆದ 30 ವರ್ಷಗಳ ಸರಾಸರಿ ಒಳಹರಿವು, ಕಾಲಕಾಲಕ್ಕೆ ಉಂಟಾದ ಮಳೆಯ ಪ್ರಮಾಣ/ಕೊರತೆ, ಕಣಿವೆಯಲ್ಲಿನ ಪ್ರಮುಖ ಜಲಾಶಯಗಳಲ್ಲಿನ ಶೇಖರಣೆ ಒಳಹರಿವು/ಹೊರಹರಿವಿನ ಪರಿಸ್ಥಿತಿ, ಹವಾಮಾನ ವಸ್ತುಸ್ಥಿತಿ, ಮಳೆಯ ಮುನ್ಸೂಚನೆ, ರಾಜ್ಯಗಳಲ್ಲಿನ ಬೆಳೆ ಪ್ರದೇಶ, ನಿಂತ ಬೆಳೆಗಳ ಪರಿಸ್ಥಿತಿ, ಕುಡಿಯುವ ನೀರಿನ ಹಾಗೂ ಕೈಗಾರಿಕಾ ಅವಶ್ಯಕತೆಗಳು, ಇತ್ಯಾದಿ ಅಂಶಗಳ ಬಗ್ಗೆ ಪರಿಶೀಲನೆ ಕೈಗೊಳ್ಳಬೇಕಿದೆ. ರಾಜ್ಯದ ಜಲಾಶಯಗಳಲ್ಲಿನ ಒಳಹರಿವಿನ ಕೊರತೆಯನ್ನು ಪರಿಗಣಿಸಿ ಅಂತರ ರಾಜ್ಯ ಗಡಿಯಲ್ಲಿರುವ CWC ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ತಮಿಳುನಾಡು ರಾಜ್ಯಕ್ಕೆ ಹರಿಸಬೇಕಾದ ನೀರಿನ ಪ್ರಮಾಣಗಳ ಬಗ್ಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ವಿವರಣೆ ನೀಡಿದರು.
ತಮಿಳುನಾಡಿಗೆ ನೀರು ಹರಿಸಿದರೂ ರೈತರ ಹಿತ ರಕ್ಷಣೆ: ಸಕ್ಷಮ ಪ್ರಾಧಿಕಾರಗಳು,ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೂ ಕೂಡ ನಾವು ನಮ್ಮ ರಾಜ್ಯದ ರೈತರ ಹಿತವನ್ನು ಸಂಪೂರ್ಣವಾಗಿ ಕಾಪಾಡಿದ್ದೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಾರಿ ಕಾವೇರಿ ನದಿ ನೀರಿನ ವಿಷಯದಲ್ಲಿ ನಮ್ಮ ರೈತರನ್ನು ನಾವು ಸಂಪೂರ್ಣ ರಕ್ಷಣೆ ಮಾಡಿದ್ದೇವೆ, ಎಲ್ಲ ಬೆಳೆಗಳನ್ನ ಉಳಿಸಲು ಬೇಕಾದ ನೀರು ಕೊಡಲಾಗಿದೆ. ಎರಡು ದಿನ ತಡವಾದರೂ ಬಿಳಿಗುಂಡ್ಲು ಮೂಲಕ ನೀರು ಹರಿಸಲಾಗಿದೆ ಎಂದರು.
ಮೇಕೆದಾಟು ಯೋಜನೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲೇ ನೀರು ಹಂಚಿಕೆ ಪರಿಹರಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ಬಿಜೆಪಿಯವರು ನಮಗೆ ಸಹಕಾರ ಕೊಡಬೇಕು, ಕೇಂದ್ರದ ಜೊತೆ ಮಾತುಕತೆ ನಡೆಸಲು ನಾವು ದೆಹಲಿಗೆ ಹೋಗಲಿದ್ದೇವೆ , ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಕಡಿತದ ಬಗ್ಗೆಯೂ ಕೇಂದ್ರದ ಜೊತೆ ಮಾತುಕತೆ ನಡೆಸಲಿದ್ದೇವೆ, ನೀವೂ ಬನ್ನಿ, ನಮಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಸಂಕಷ್ಟ ಸೂತ್ರ ಬಂದರೆ ಬೀಗ ನಮ್ಮ ಕೈತಪ್ಪಲಿದೆ, ಅವರ ಕೈಗೆ ಹೋಗಲಿದೆ ಹಾಗಾಗಿ ಈಗಿರುವ ವ್ಯವಸ್ಥೆಯಲ್ಲಿ ನಮ್ಮ ರೈತರಿಗೆ ಅನುಕೂಲವಾಗುವಂತೆ ನಡೆದುಕೊಳ್ಳಲಿದ್ದೇವೆ ಎಂದರು. ರವಿಕುಮಾರ್ ಪದೇ ಪದೆ ಸಂಕಷ್ಟ ಸೂತ್ರದ ವಿಚಾರ ಪ್ರಸ್ತಾಪಿಸಿದ್ದಕ್ಕೆ ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಷಯ ಬಹಿರಂಗವಾಗಿ ಮಾತನಾಡಲಾಗಲ್ಲ. ಬಂದು ವೈಯಕ್ತಿಕವಾಗಿ ಮಾತನಾಡಿ ಎಂದು ಸಲಹೆ ನೀಡಿ ಚರ್ಚೆಗೆ ತೆರೆ ಎಳೆದರು.
ಕೃಷ್ಣಾ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ: ಕೃಷ್ಣ ಭಾಗ್ಯ ಜಲ ನಿಗಮದ ವ್ಯಾಪ್ತಿ ಭೂಮಿ ಕಳೆದುಕೊಂಡವರಿಗೆ ಪರಿಹಾರದ ಹಣ ಕೊಡುವ ಕೆಲಸಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಹನುಮಂತ ನಿರಾಣಿ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಕೃಷ್ಣ ಭಾಗ್ಯ ಜಲ ನಿಗಮದ ಕಾಮಗಾರಿ ರಾಜ್ಯದಲ್ಲಿ ಬಹಳ ದೊಡ್ಡ ನೀರಾವರಿ ಕಾಮಗಾರಿಯಾಗಿದೆ. ಇದರಲ್ಲಿ ಭೂಸ್ವಾಧೀನ ವಿಚಾರ ಮುಖ್ಯವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಪರಿಹಾರ ಮೊತ್ತವನ್ನು 25 ಲಕ್ಷ ರೂ. ಎಂದು ನಿಗದಿ ಮಾಡಿದ್ದರು. 1300 ಕೋಟಿ ಕೊಡಬೇಕು ಎನ್ನುವ ಪ್ರಸ್ತಾಪನೆ ಇದೆ.
ಹಾಗಾಗಿ ಮೊದಲ ಆದ್ಯತೆಯಾಗಿ ಭೂಮಿ ಕಳೆದುಕೊಂಡವರಿಗೆ ಹಣ ಕೊಡುವ ಕೆಲಸ ಮಾಡಲಿದ್ದೇವೆ. ಆದ್ಯತೆ ಮೇರೆಗೆ ಈ ಯೋಜನೆ ಆಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಕೆಲವೆಡೆ ರೈತರು ಭೂಮಿ ಬಿಟ್ಟುಕೊಟ್ಟು ಕೆಲಸಕ್ಕೂ ಅವಕಾಶ ಮಾಡಿಕೊಟ್ಟಿದ್ದಾರೆ ಅವರನ್ನೂ ಸ್ಮರಿಸಿ ಅವರಿಗೂ ಪರಿಹಾರ ಕೊಡುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದನ್ನೂಓದಿ:ನಾಲ್ಕು ಲಕ್ಷ ರೈತರ ಕೃಷಿ ಪಂಪ್ ಸೆಟ್‍ಗಳಿಗೆ ಮೂಲ ಸೌಕರ್ಯ: ಸಚಿವ ಕೆ ಜೆ ಜಾರ್ಜ್