ಬೆಂಗಳೂರು: ರಾಜ್ಯವೇ ಕೋವಿಡ್-19 ಅಟ್ಟಹಾಸಕ್ಕೆ ನಲುಗಿ ಹೋಗಿದೆ. ಇನ್ನು ಶಕ್ತಿಕೇಂದ್ರ ವಿಧಾನಸೌಧ ಕೂಡ ಈ ಆತಂಕದಿಂದ ಹೊರತಾಗಿಲ್ಲ. ಈ ಮಧ್ಯೆ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಜೆಡಿಎಸ್ ಸದಸ್ಯ ಗೋವಿಂದರಾಜು, ನಿಯಮಗಳನ್ನು ಗಾಳಿಗೆ ತೂರುವ ಕೆಲಸ ಮಾಡಿದ್ದಾರೆ.
ಕೊರೊನಾ ಆತಂಕ ವ್ಯಾಪಕವಾಗಿ ಹೆಚ್ಚಿರುವ ಹಿನ್ನೆಲೆ 5ಕ್ಕಿಂತ ಹೆಚ್ಚು ಮಂದಿ ಆಗಮಿಸಬೇಡಿ ಎಂದು ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಈ ಹಿಂದೆ ಸೂಚನೆ ನೀಡಿದ್ದರು. ಆದರೆ, ಗೋವಿಂದರಾಜು ತಮ್ಮ ಆಪ್ತರು ಹಾಗೂ ಕುಟುಂಬ ಸದಸ್ಯರ ಸಮೇತವಾಗಿ ಆಗಮಿಸಿದ್ದರು. ಸಭಾಪತಿಗಳ ಕೊಠಡಿ ಒಳಗೆ 25ಕ್ಕೂ ಹೆಚ್ಚು ಮಂದಿ ಕುಳಿತುಕೊಂಡಿದ್ದರು. ಈ ವೇಳೆ, ಸಾಮಾಜಿಕ ಅಂತರ ಸಹ ಕಾಪಾಡಿಕೊಂಡಿಲ್ಲ. ಅಷ್ಟೇ ಅಲ್ಲದೆ, ಮಾಸ್ಕ್ ಕೂಡ ಧರಿಸಿರಲಿಲ್ಲ. ಇನ್ನು ವಿಧಾನಸೌಧ ಕಾರಿಡಾರ್ ಮೇಲೆ ಗೋವಿಂದರಾಜು ಸಂಬಂಧಿಕರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ಫೋಟೋ ತೆಗೆದುಕೊಳ್ಳುವುದರಲ್ಲಿ ತಲ್ಲೀನವಾಗಿದ್ದು ಕಂಡುಬಂತು.
ವಿಧಾನಸೌಧ, ವಿಕಾಸಸೌಧದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಇಂತಹ ನಿರ್ಲಕ್ಷ್ಯ ತಲೆದೋರುತ್ತಿರುವುದು ವಿಷಾದನೀಯ. ರೋಗದ ವಿರುದ್ಧ ಜನ ಜಾಗೃತಿ ಮೂಡಿಸಬೇಕಾದ ಜನಪ್ರತಿನಿಧಿಗಳೇ ಈ ರೀತಿ ನಡೆದುಕೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.