ಬೆಂಗಳೂರು: ಕೃಷ್ಣ ಮೇಲ್ದಂಡೆ ಯೋಜನೆಯ ಹಂತ-2 ರಡಿ ಆಲಮಟ್ಟಿ ಬಲದಂಡೆ ಕಾಲುವೆಗಳು ಶಿಥಿಲಗೊಂಡಿದ್ದು, ಆಧುನೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆ ಶಾಸಕ ದೊಡ್ಡನಗೌಡ.ಜಿ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕಾಲುವೆಗಳು ನಿರ್ಮಾಣವಾಗಿ ಹಲವು ವರ್ಷಗಳಾಗಿವೆ. ಈಗ ದುರಸ್ತಿ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಆಧುನೀಕರಣ ಮಾಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು. ಕಾಲುವೆಗಳ ಆಧುನೀಕರಣವನ್ನು ಕೇಂದ್ರ ಸರ್ಕಾರದ ಎಐಡಿಬಿ ನೆರವಿನಲ್ಲಿ ದುರಸ್ತಿ ಮಾಡಲಾಗುವುದು. ಕೇಂದ್ರದಿಂದ ಶೇ.60, ರಾಜ್ಯದಿಂದ ಶೇ.40 ರಷ್ಟು ಅನುದಾನ ಸಿಗಲಿದ್ದು, ತಾಂತ್ರಿಕ ಸಮಿತಿಯಿಂದ ಅನುಮತಿ ಪಡೆದು ದುರಸ್ತಿ ಕಾರ್ಯವನ್ನು ಆಧುನಿಕರಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಯೋಜನೆಯಡಿ ಮುಖ್ಯ ಕಾಲುವೆಯು 67.50 ಕಿ.ಮೀ ಉದ್ದ ಮಾಡಲಾಗಿದೆ. ಇದರಲ್ಲಿ ಈಗಾಗಲೇ 59 ಕಿ.ಮೀ. ಕಾಮಗಾರಿ ಪೂರ್ಣಗೊಳಿಸಲಾಗಿದೆ. ಉಳಿದಿರುವ 9.50 ಕಾಲುವೆಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಶಾಸಕರಾದ ದೊಡ್ಡನಗೌಡ ಪಾಟೀಲ್ ಮತ್ತು ಈರಣ್ಣ ಚರಂತಿಮಠ ಮಾತನಾಡಿ, ಕಾಲುವೆ ಕಾಮಗಾರಿ ವಿಳಂಬವಾಗಿರುವುದರಿಂದ ನಮ್ಮ ಭಾಗಕ್ಕೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಉಕ್ರೇನ್ನಿಂದ ಪಾಕ್ ವಿದ್ಯಾರ್ಥಿನಿ ರಕ್ಷಣೆ.. ಮೋದಿ, ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದ ಹೇಳಿದ ಅಸ್ಮಾ!
ಕಾಲಮಿತಿಯೊಳಗೆ ಪರಿಹಾರ : ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಗೆ ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಕಾಲಮಿತಿಯೊಳಗೆ ಪರಿಹಾರವನ್ನು ನೀಡಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಅವರು ಜೆಡಿಎಸ್ ಶಾಸಕ ಶ್ರೀನಿವಾಸಮೂರ್ತಿ ಪ್ರಶ್ನೆಗೆ ಉತ್ತರಿಸಿದರು. ಈ ಯೋಜನೆಯು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಗೂ ಬರುತ್ತದೆ. ಸೀಗೆಹಳ್ಳಿ ಮತ್ತು ರಾಮನಗರ ಸ್ಪೀಡರ್ ಕಾಲುವೆ 52.89 ಕಿ.ಮೀ ಹಾಗೂ ಏತಘಟಕಗಳನ್ನು ಒಳಗೊಂಡಂತೆ 12.06 ಕಿ.ಮೀ ಕಾಮಗಾರಿ ನಡೆಯುತ್ತಿದೆ.
ಪೈಪ್‌ಗಳ ವಿತರಣೆ, ಅಳವಡಿಕೆ, ಪರೀಕ್ಷೆ, ಸಿದ್ಧಪಡಿಸುವಿಕೆ, ಅಡ್ಡಮೋರಿ ಕೆಲಸಗಳು ಒಳಗೊಂಡಂತೆ ಗೌರಿಬಿದನೂರು ಸೀಡರ್ ಕಾಲುವೆಯಿಂದ 81.60 ಕಿ.ಮೀ ಕಾಮಗಾರಿಗೆ ಆರಂಭವಾಗಿದೆ. ಈ ಕಾಮಗಾರಿಗೆ ರೈತರಿಂದ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಈಗಾಗಲೇ 200 ಕೋಟಿ ರೂ.ಗೂ ಹೆಚ್ಚು ಪರಿಹಾರವನ್ನು ನೀಡಿದ್ದೇವೆ. ಅದೇ ರೀತಿ ನೆಲಮಂಗಲದಲ್ಲೂ ರೈತರಿಗೆ ಸರ್ಕಾರ ಪರಿಹಾರವನ್ನು ಒದಗಿಸಲಿದೆ ಎಂದರು.
ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ.ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ 16 ಸಣ್ಣ ನೀರಾವರಿ ಕೆರೆಗಳನ್ನು ಮುಳವಾಡ ಏತನೀರಾವರಿ ಯೋಜನೆಯಡಿ ಆದಷ್ಟು ಶೀಘ್ರ ಕಾಮಗಾರಿ ಆರಂಭಿಸಲಾಗುವುದು, ಈ ಸರ್ಕಾರದ ಮೇಲೆ ಭರವಸೆ ಇಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಸುಮಿಯಲ್ಲಿ ಸಿಲುಕಿದ 694 ಭಾರತೀಯರ ಸುರಕ್ಷಿತ ಸ್ಥಳಾಂತರ: ಕೇಂದ್ರ ಸರ್ಕಾರ
ಮೇಲ್ಸೇತುವೆ ಕಾಮಗಾರಿ ಶೀಘ್ರ ಪೂರ್ಣ : ಬಿಟಿಎಂ ಲೇಔಟ್ ಕ್ಷೇತ್ರದ ವ್ಯಾಪ್ತಿಯ ಈಜೀಪುರ ಜಂಕ್ಷನ್‌ನಿಂದ ಕೇಂದ್ರೀಯ ಸದನದವರೆಗೂ ನಿರ್ಮಾಣ ವಾಗುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಬೆಂಗಳೂರು ನಗರ ಉಸ್ತುವಾರಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದರು.
ಸುಗಮ ಸಂಚಾರಕ್ಕಾಗಿ ರಸ್ತೆ ಕಾಲುವೆ, ಫುಟ್ ಪಾತ್ ಮತ್ತಿತರ ಸೌಲಭ್ಯಗಳನ್ನು ನಿರ್ಮಿಸಿಕೊಡಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ. ಶೀಘ್ರದಲ್ಲೇ ಬಿಬಿಎಂಪಿ ಆಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
2018 ರಲ್ಲಿ ಈ ಕಾಮಗಾರಿ ಪ್ರಾರಂಭಿಸಲಾಗಿತ್ತು. ಕೆಲವು ಕಾರಣದಿಂದ ವಿಳಂಬವಾಗಿದೆ. ಕಾಮಗಾರಿ ಗುತ್ತಿಗೆದಾರರಾದ ಸಿಂಪ್ಲೆಕ್ಸ್ ಇನ್‌ಫ್ರಾಸ್ಟಕ್ಟರ್ ಲಿ. ಇವರು ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದೇ ಮಂದಗತಿಯಲ್ಲಿ ನಡೆಸಿದ್ದರಿಂದ ಅವರಿಗೆ ದಂಡವನ್ನು ವಿಧಿಸಿ, ಅವರ ಗುತ್ತಿಗೆ ರದ್ದುಪಡಿಸಲಾಗಿದೆ. ಇನ್ನು ಮುಂದೆ ವಿಳಂಬವಾಗದಂತೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಸಿಎಂ ನೀಡಿದರು.
ಇದನ್ನೂ ಓದಿ: ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ ಪತಿ: ರಾಬರ್ಟ್ ವಾದ್ರಾ ಸ್ಪರ್ಧಿಸುವ ಕ್ಷೇತ್ರ ಯಾವುದು?
ಕಾರ್ಮಿಕರಿಗೆ ನಿಯಮಾನುಸಾರ ಪರಿಹಾರ : ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಲ್ಲಿಸಿದ್ದ ಎಲ್ಲ ಫಲಾನುಭವಿಗಳಿಗೆ ನಿಯಮಾನುಸಾರ ಪರಿಹಾರ ನೀಡಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪುರ್ ಪ್ರಶ್ನೆಗೆ ಉತ್ತರಿಸಿದರು. ವಿವಿಧ ಸೌಲತ್ತುಗಳನ್ನು ಪಡೆಯಲು ಮಂಡಳಿಗೆ ಸಲ್ಲಿಸಿದ್ದಾರೋ ಅವರಿಗೆಲ್ಲರಿಗೂ ಪರಿಹಾರ ಒದಗಿಸಲಾಗಿದೆ. ಯಾವುದೇ ಒಂದೂ ಅರ್ಜಿಯೂ ಕೂಡ ಬಾಕಿ ಉಳಿದಿಲ್ಲ ಎಂದು ಹೇಳಿದರು.
ಅರ್ಹರು ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ, ಕಾರ್ಮಿಕರಿಗೆ ವೈದ್ಯಕೀಯ ನೆರವು, ಅಪಘಾತದ ಧನಸಹಾಯ, ಅಂಗವಿಕಲ ಕಾರ್ಮಿಕರಿಗೆ ಕೃತಕ ಅಂಗಸಾಧನ ಖರೀದಿಸಲು ಆರ್ಥಿಕ ನೆರವು, ಮೃತ ಕಾರ್ಮಿಕರ ಅಂತ್ಯಸಂಸ್ಕಾರಕ್ಕೆ ಧನಸಹಾಯ, ವಾರ್ಷಿಕ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಳ್ಳುವ ಟ್ರೇಡ್ ಯೂನಿಯನ್ ಸಂಸ್ಥೆಗಳಿಗೆ ಧನಸಹಾಯ ಸೇರಿದಂತೆ ಹಲವು ರೀತಿಯ ನೆರವು ನೀಡಿದೆ. ಮಂಡಳಿ ನೀಡುತ್ತಿದ್ದ ಧನಸಹಾಯವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
10 ಸಾವಿರದಿಂದ 25 ರೂ.ವರೆಗೆ ಮತ್ತು 50 ಸಾವಿರ ರೂ.ನಿಂದ ಒಂದು ಲಕ್ಷ ರೂ.ವರೆಗೆ ಬೇರೆ ಬೇರೆ ಯೋಜನೆಗಳ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ. ಅರ್ಹ ಫಲಾನುಭವಿಗಳು ಯಾರೇ ಅರ್ಜಿ ಸಲ್ಲಿಸಿದರೂ ನಿಯಮಗಳ ಪ್ರಕಾರ ಪರಿಹಾರ ಒದಗಿಸುತ್ತಿದ್ದೇವೆ. ಇದುವರೆಗೂ 44 ಸಾವಿರ ಮಂದಿ ಕಾರ್ಮಿಕರಿಗೆ ನೆರವು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.