ಬೆಂಗಳೂರು : ಭೌತಿಕ ಶೈಕ್ಷಣಿಕ ವ್ಯವಸ್ಥೆ ಆರಂಭ ಕುರಿತು ಒಂದು ಸಮಿತಿಯಿಂದ ನಿರ್ಧಾರ ಸಾಧ್ಯವಿಲ್ಲ. ಬೇರೆ ಬೇರೆ ಇಲಾಖೆಗಳ ಜೊತೆ ಸಮನ್ವಯ ಸಾಧಿಸಬೇಕಾಗುತ್ತದೆ. ನಾವು ನಮ್ಮ ವರದಿ ನೀಡಿದ್ದೇವೆ. ಉಳಿದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತದೆ ಎಂದು 3ನೇ ಅಲೆ ತಜ್ಞರ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 3ನೇ ಅಲೆ ಕುರಿತು ಸರ್ಕಾರಕ್ಕೆ ಇಂದು ಮಧ್ಯಂತರ ವರದಿ ಸಲ್ಲಿಸಿದ್ದೇವೆ. ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಆರಂಭ ಕುರಿತು ಪ್ರಸ್ತಾಪ ಮಾಡಿದ್ದೇವೆ. ಹಾಗಾಗಿ, ಶಾಲೆ ಆರಂಭದ ಬಗ್ಗೆ ನಾನು ಮಾಧ್ಯಮಗಳ ಮುಂದೆ ಏನನ್ನೂ ಹೇಳಲು ಸಾಧ್ಯವಿಲ್ಲ. ಸರ್ಕಾರ ಒಂದು ಪಾಸಿಟಿವ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
3ನೇ ಅಲೆ ತಡೆಗಟ್ಟುವ ಕುರಿತು ಡಾ. ದೇವಿ ಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಸಭೆಯ ಮುಖ್ಯಾಂಶಗಳು :
• ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಮಕ್ಕಳ ಹೆಚ್‌ಡಿಯು ಘಟಕ, ಮಕ್ಕಳ ತೀವ್ರ ನಿಗಾ ಘಟಕ ಸ್ಥಾಪನೆ, ಮಕ್ಕಳ ಆಸ್ಪತ್ರೆ ಸ್ಥಾಪನೆ ಕುರಿತು ಸಲಹೆ.
• 3ನೇ ಅಲೆ ತಡೆಗಟ್ಟಲು ಮಾನವ ಸಂಪನ್ಮೂಲ, ಆರ್ಥಿಕ ಸಂಪನ್ಮೂಲ ಹಾಗೂ ಪರಿಣತರ ನೆರವು ಪಡೆಯುವ ಕುರಿತು ಸಹ ಸಮಿತಿ ಸಲಹೆ ನೀಡಿದೆ. ವಿವಿಧ ವೈದ್ಯಕೀಯ ಸಂಘಟನೆಗಳ ಸಹಯೋಗದೊಂದಿಗೆ ವೈದ್ಯರು, ದಾದಿಯರ ಕೊರತೆ ನಿವಾರಣೆ, ರಾಜ್ಯದಲ್ಲಿರುವ ಎಲ್ಲ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯುವುದು, ಕಾರ್ಪೊರೇಟ್ ಸಂಸ್ಥೆಗಳ ಸಹಕಾರದಿಂದ ಸಂಪನ್ಮೂಲಗಳ ನೆರವು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕರ ಸಹಭಾಗಿತ್ವ ಪಡೆಯುವ ಬಗ್ಗೆ ಸಲಹೆ ನೀಡಿದೆ.
• ಅಪೌಷ್ಟಿಕತೆ ನಿವಾರಣೆಗೆ ಆದ್ಯತೆ ನೀಡುವಂತೆಯೂ ತಜ್ಞರ ಸಮಿತಿ ಸಲಹೆ ನೀಡಿದೆ.
• ಕೋವಿಡ್ಗೆ ತುತ್ತಾದ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸಲು ಪ್ರತಿ ಆಸ್ಪತ್ರೆಯಲ್ಲಿ ಮನೋವೈದ್ಯರ ಸೇವೆ ಒದಗಿಸುವುದು ಸೂಕ್ತ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
• ಆಮ್ಲಜನಕ ಕೊರತೆ ನಿವಾರಣೆ ಕುರಿತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲಹೆ ನೀಡಿದೆ.
• ಕೋವಿಡ್ ನಂತರ ತಲೆದೋರುವ ಆರೋಗ್ಯ ಸಮಸ್ಯೆಗಳ ಕುರಿತು ಎಚ್ಚರ ವಹಿಸುವ ಕುರಿತು ಹಾಗೂ ಕೋವಿಡ್ ಅಲ್ಲದೆ ಇತರ ಆರೋಗ್ಯ ಸಮಸ್ಯೆಗಳಿಗೂ ಆದ್ಯತೆ ನೀಡುವ ಅಗತ್ಯವಿದೆ.
• ಮಕ್ಕಳಿಗೆ ಪರೀಕ್ಷೆ ನಡೆಸುವ ಬಗ್ಗೆ, ಕೋವಿಡ್ ಕೇರ್ ಸೆಂಟರ್ಗಳಲ್ಲಿರುವ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು.
• ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಅತ್ಯಂತ ಸೂಕ್ತ ಪರಿಹಾರವಾಗಿದೆ. ಲಸಿಕೆ ಅಭಿಯಾನ ಇನ್ನಷ್ಟು ತೀವ್ರಗೊಳಿಸಲು ಸಲಹೆ ನೀಡಿದೆ.
ಶಾಲಾ-ಕಾಲೇಜು ತೆರೆಯುವ ಬಗ್ಗೆ..
• ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದಕ್ಕೆ ಲಸಿಕೆ ನೀಡಲು ಆದ್ಯತೆ ನೀಡುವಂತೆ ಸಲಹೆ ಮಾಡಲಾಗಿದೆ.
• ಶಾಲಾ-ಕಾಲೇಜುಗಳನ್ನು ಹಂತ ಹಂತವಾಗಿ ತೆರೆಯುವ ಬಗ್ಗೆ ಚಿಂತನೆ ನಡೆಸಲು ಸಮಿತಿ ಸಲಹೆ ನೀಡಿದೆ.
• 18 ವಯಸ್ಸಿನ ಮೇಲಿನ ಮಕ್ಕಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಿ ಕಾಲೇಜುಗಳನ್ನು ಪ್ರಾರಂಭಿಸುವ ಚಿಂತನೆ ನಡೆಸಲಾಗಿದೆ.
ಓದಿ: ಸಿಡಿ ಕೇಸ್ ಪಿಐಎಲ್ ವಿಚಾರಣೆಗೆ ಅರ್ಹವಲ್ಲ: ಜಾರಕಿಹೊಳಿ ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಕೆ