ಬೆಂಗಳೂರು : ರಾಜ್ಯದ ಎಲ್ಲ ಗ್ರಾಮಗಳಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಒದಗಿಸಿರುವ ಕುರಿತಂತೆ ಸಮಗ್ರ ವರದಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡುವಂತೆ ಹೈಕೋರ್ಟ್‌ಗೆ ಸರ್ಕಾರ ಮನವಿ ಮಾಡಿದೆ. ರಾಜ್ಯದ ಎಲ್ಲಾ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಶವಸಂಸ್ಕಾರಕ್ಕೆ ಸ್ಮಶಾನ ಜಾಗ ಒದಗಿಸುವಂತೆ 2019ರ ಆಗಸ್ಟ್ 20ರಂದು ಹೈ ಕೋರ್ಟ್ ನೀಡಿದ್ದ ಆದೇಶ ಸರ್ಕಾರ ಪಾಲಿಸಿಲ್ಲ ಎಂದು ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬುವರು ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ನ್ಯಾ.ಬಿ.ವೀರಪ್ಪ ಮತ್ತು ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು, ಕಂದಾಯ ಇಲಾಖೆಯ ಕಾರ್ಯದರ್ಶಿ ಎನ್. ಜಯರಾಮ್ ಅವರು ನೀಡಿರುವ ಅನುಪಾಲನಾ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಒದಗಿಸಿರುವ ಮಾಹಿತಿಯಂತೆ ರಾಜ್ಯದ ಒಟ್ಟು 28,222 ಗ್ರಾಮಗಳ ಪೈಕಿ ಈವರೆಗೆ 27,903 ಗ್ರಾಮಗಳಿಗೆ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಒದಗಿಸಲಾಗಿದೆ. ಇನ್ನೂ 319 ಗ್ರಾಮಗಳಿಗೆ ಮಾತ್ರ ಸ್ಮಶಾನ ಜಾಗ ಒದಗಿಸಬೇಕಾಗಿದ್ದು, ಸ್ಮಶಾನ ಜಾಗ ಒದಗಿಸುವ ಕಾರ್ಯ ಶೇ. 98.87ರಷ್ಟಾಗಿದೆ. 56 ಗ್ರಾಮಗಳಲ್ಲಿ ಸ್ಮಶಾನ ಜಾಗ ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಈ ರೀತಿ ಉಳಿದ 319 ಗ್ರಾಮಗಳಿಗೆ ಸ್ಮಶಾನ ಜಾಗ ಒದಗಿಸುವ ಮತ್ತು 56 ಗ್ರಾಮಗಳಲ್ಲಿ ಸ್ಮಶಾನ ಒತ್ತುವರಿ ಆಗಿರುವುದನ್ನು ತೆರವುಗೊಳಿಸಿ ನ್ಯಾಯಾಲಯಕ್ಕೆ ಸಮಗ್ರ ವರದಿ ಸಲ್ಲಿಸಲು 30 ದಿನ ಕಾಲಾವಕಾಶ ಬೇಕು ಎಂದು ಪ್ರಮಾಣಪತ್ರದಲ್ಲಿ ಮನವಿ ಮಾಡಲಾಗಿದೆ. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಜ.31ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಸಿವಿಲ್ ಪ್ರಕರಣದಲ್ಲಿ ವಕೀಲರ ಥಳಿಸಿದ್ದ ಆರೋಪ: ಪೊಲೀಸರ ವಿರುದ್ಧ ಹೈಕೋರ್ಟ್ ಗರಂ
ಸ್ಮಶಾನದ ರಸ್ತೆ ಒತ್ತುವರಿ ಸಂಬಂಧ ನೋಟಿಸ್ ಜಾರಿ ಮಾಡಿದ್ದ ಹೈಕೋರ್ಟ್: ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನ ಆರ್.ಟಿ ನಗರದ ಮಠದಹಳ್ಳಿ ಸ್ಮಶಾನದ ಸುತ್ತಮುತ್ತಲಿನ ಜಾಗ ಹಾಗೂ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಹೈ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್, ಬಿಬಿಎಂಪಿ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿತ್ತು. ಬೆಂಗಳೂರಿನ ಆರ್.ಟಿ ನಗರದ ನಿವಾಸಿಗಳಾದ ಡಿ. ಚಂದ್ರ, ಎಲ್. ತಿಲಕ್ ಕುಮಾರ್ ಹಾಗೂ ಟಿ ಪ್ರಕಾಶ್ ರಾವ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಕೆಲ ಕಾಲ ವಾದ ಆಲಿಸಿದ ಪೀಠವು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿತ್ತು.
ಒತ್ತುವರಿ ಆಗಿದೆ ಎನ್ನಲಾದ ಸ್ಮಶಾನ ಜಾಗಕ್ಕೆ ಭೇಟಿ ನೀಡಿ, ಪರಿಶೀಲಿಸುವಂತೆ ಬಿಬಿಎಂಪಿ ಆಯುಕ್ತರು ಓರ್ವ ಅಧಿಕಾರಿಯನ್ನು ನಿಯೋಜಿಸಬೇಕು. ಅಧಿಕಾರಿಯು ಸ್ಥಳ ಪರಿಶೀಲನೆ ನಡೆಸಿ, ಅರ್ಜಿದಾರರು ಆರೋಪಿಸಿರುವಂತೆ ಸ್ಮಶಾನ ಒತ್ತುವರಿಯಾಗಿದೆಯೇ ಎಂಬ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಹೇಳಿತ್ತು.
ಇದನ್ನೂ ಓದಿ: ಪ್ರಕರಣದ ವಿಚಾರಣೆ ವೇಳೆ ಚಾಟ್ ಬಾಕ್ಸ್ನಲ್ಲಿ ಸಂದೇಶ ಮಾಡಿದ ವಿದ್ಯಾರ್ಥಿಗಳು: ಹೈಕೋರ್ಟ್ ಗರಂ