ಬೆಂಗಳೂರು: ರಾಜ್ಯ ಸರ್ಕಾರವು ವಿವೇಕಾನಂದರ ಹೆಸರಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ನಿರ್ಮಿಸಲು ಹೊರಟಿರುವ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲು ಮುಂದಾಗಿದೆ. ರಾಜ್ಯದಲ್ಲಿ 8,000ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕೆ ವಿವೇಕ ಶಾಲೆ ಕೊಠಡಿ ಎಂದು ಹೆಸರಿಡುವ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ 8,100 ಶಾಲಾ ಕಾಲೇಜು ಕೊಠಡಿಗಳಿಗೆ ಸ್ವಾಮಿ ವಿವೇಕಾನಂದ ಅವರ ಹೆಸರು ಇಡುವ ಉದ್ದೇಶ ಇದೆ. ಈಗಾಗಲೇ 992 ಕೋಟಿ ವೆಚ್ಚದಲ್ಲಿ ಶಾಲಾ-ಕಾಲೇಜು ಹೊಸ ಕೊಠಡಿಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಇವುಗಳಿಗೆ ಮಾತ್ರ ಮೊದಲ ಹಂತದಲ್ಲಿ ವಿವೇಕಾನಂದ ಪರಿಕಲ್ಪನೆಯ ಬಣ್ಣ ಬಳಿಸಲಾಗುವುದು ಎಂದು ಶಿಕ್ಷಣ ಇಲಾಖೆ ವಿವರಿಸುತ್ತಿದೆ. ಈ ವಿಚಾರದ ಹಿಂದೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಬಲವಾದ ಪ್ರತಿಪಾದನೆ ಇದೆ.
ಕೇಸರಿ ಎಂಬುದು ಉದಾತ್ತ ಮೌಲ್ಯಗಳಿಗೆ, ಉತ್ತಮ ಆದರ್ಶಗಳಿಗೆ ಸಂಕೇತವಾಗಿದೆ. ವಿವೇಕಾನಂದರ ಹೆಸರಿನ ಕೊಠಡಿಗಳಿಗೆ ಸೂಕ್ತ ಬಣ್ಣ ಅದು. ಮಕ್ಕಳನ್ನು ಆಕರ್ಷಿಸುವುದಕ್ಕೂ ಅದು ಸಹಾಯ ಮಾಡುತ್ತದೆ ಎಂಬುದು ಶಿಕ್ಷಣ ಇಲಾಖೆಯ ಚಿಂತನೆ ಎಂದು ವಿವರಿಸಲಾಗುತ್ತಿದೆ.
ಈಗಾಗಲೇ ಪಠ್ಯಕ್ರಮದ ವಿಚಾರವಾಗಿ ಉಂಟಾಗಿರುವ ದೊಡ್ಡ ಗದ್ದಲವನ್ನೇ ನಿಭಾಯಿಸಲು ಸರ್ಕಾರ ಹೆಣಗಾಡುತ್ತಿದ್ದು, ಶಾಲಾ-ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ತೀರ್ಮಾನ ಕೈಗೊಂಡರೆ ಇನ್ನಷ್ಟು ಪ್ರತಿರೋಧವನ್ನು ಎದುರಿಸಬೇಕಾಗಿ ಬರಲಿದೆ. ಶಿಕ್ಷಣ ಕ್ಷೇತ್ರವನ್ನ ಬಿಜೆಪಿ ಸರ್ಕಾರ ಕೇಸರಿಮಯ ಮಾಡುತ್ತಿದೆ. ಸಂಘ ಪರಿವಾರದ ನಾಯಕರ ಮಾತಿಗೆ ಬೆಲೆಕೊಟ್ಟು ಶಿಕ್ಷಣ ಕ್ಷೇತ್ರವನ್ನೇ ಬದಲಿಸಲು ಹೊರಟಿದೆ ಎಂಬ ಆರೋಪವನ್ನು ಪ್ರತಿಪಕ್ಷಗಳು ಬಿಜೆಪಿ ಮೇಲೆ ಮಾಡುತ್ತಿವೆ. ಆದರೆ ಇದಕ್ಕೆ ಯಾವುದೇ ರೀತಿ ಸೊಪ್ಪು ಹಾಕದ ಶಿಕ್ಷಣ ಸಚಿವರು ತಮ್ಮ ಪಾಡಿಗೆ ತಾವು ತಮ್ಮ ಕಾರ್ಯ ಮುಂದುವರೆಸಿದ್ದಾರೆ.
ಹೊಸದಾಗಿ ನಿರ್ಮಾಣವಾಗುತ್ತಿರುವ ವಿವೇಕ ಹೆಸರಿನ 8,000 ಸರ್ಕಾರಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವುದು ಸೂಕ್ತ. ಬಣ್ಣ ಹೇಗಿರಬೇಕು, ಕಿಟಕಿ ಹೇಗಿರಬೇಕು, ಮೆಟ್ಟಿಲು ಹೇಗಿರಬೇಕು ಎಂಬುದರ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ವಾಸ್ತುಶಿಲ್ಪಿಗಳು ಕೊಡುವ ವಿನ್ಯಾಸದ ಆಧಾರದ ಮೇಲೆ ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಬಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಪ್ರತಿಪಕ್ಷಕ್ಕೆ ಟಾಂಗ್: ಒಂದಷ್ಟು ಜನರಿಗೆ (ಕಾಂಗ್ರೆಸ್) ಕೇಸರಿ ಬಣ್ಣದ ಬಗ್ಗೆಯೇ ಅಲರ್ಜಿ ಇದೆ. ಆದರೆ ಅವರ ಪಕ್ಷದ ಧ್ವಜದಲ್ಲೂ ಕೇಸರಿ ಇದೆ. ಅದನ್ನು ತೆಗೆದುಹಾಕಲಿ. ಪೂರ್ತಿ ಹಸಿರು ಬಣ್ಣದ ಧ್ವಜ ಮಾಡಿಕೊಂಡು ಬಿಡಲಿ ಎಂದಿದ್ದಾರೆ.
ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ: ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ವಿಚಾರವಾಗಿ ಕಾಂಗ್ರೆಸ್ ಟೀಕೆಗೆ ಕಲಬುರಗಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, 'ವಿವೇಕ ಶಾಲೆ ಯೋಜನೆಯಡಿ ರಾಜ್ಯದಾದ್ಯಂತ ಶಾಲಾ ಕೊಠಡಿಗಳ ನಿರ್ಮಾಣ ನಡೆದಿದೆ. ಕಾಂಗ್ರೆಸ್ನವರು ಅನಗತ್ಯವಾಗಿ ವಿವಾದ ಸೃಷ್ಟಿಸಿದ್ದಾರೆ.. ಏನೇ ಪ್ರಗತಿ ಮಾಡಿದರೂ ವಿವಾದ ಮಾಡುವ ಕೆಲಸ ಮಾಡುತ್ತಿದ್ದಾರೆ. ಟೀಕೆ ಮಾಡುವವರಿಗೆ ಅಭಿವೃದ್ಧಿ ಬೇಕಿಲ್ಲ. ಮಕ್ಕಳಿಗಾಗಿ ನಿರ್ಮಿಸುವ ಶಾಲಾ ಕೊಠಡಿಗಳ ನಿರ್ಮಾಣದಲ್ಲಿ ಕೂಡ ರಾಜಕಾರಣ ಮಾಡುವುದು ಸರಿಯಲ್ಲ. ಕೇಸರಿ ಅಂದರೆ ಇವರಿಗೆ ಭಯವೇಕೆ? ನಮ್ಮ ರಾಷ್ಟ್ರಧ್ವಜದಲ್ಲಿಯೂ ಕೇಸರಿಯಿದೆ. ವಿವೇಕಾನಂದ ಅವರು ತೊಡುತ್ತಿದ ಬಟ್ಟೆ ಕೂಡ ಕೇಸರಿಯಾಗಿದೆ. ಅನಗತ್ಯವಾಗಿ ಕೇಸರಿ ಬಣ್ಣ ಇಟ್ಟುಕೊಂಡು ಟೀಕಿಸುವುದು ಸರಿಯಲ್ಲ' ಎಂದುಹೇಳಿದ್ದಾರೆ.