ಬೆಂಗಳೂರು: ಶಾಲೆಗಳನ್ನು ಜನಪ್ರತಿನಿಧಿಗಳು ಸೇರಿದಂತೆ ಸಮಾಜದ ವಿವಿಧ ಸಂಘ - ಸಂಸ್ಥೆಗಳು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವಂತಹ ಪರಿಕಲ್ಪನೆ ದೇಶದಲ್ಲೇ ಮೊದಲನೆಯದಾಗಿದ್ದು, ಇದು ಉಳಿದವರಿಗೂ ಪ್ರೇರಣೆಯಾಗಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಆಶ್ರಯದಲ್ಲಿ ನಡೆದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಸಮಾರಂಭದಲ್ಲಿ, ದತ್ತು ಸ್ವೀಕರಿಸಿದ ಸಂಸ್ಥೆಗಳಿಗೆ ಶಾಲಾ ದತ್ತು ಪತ್ರಗಳನ್ನು ವಿತರಿಸಿ ಮಾತನಾಡಿದರು. ಸರ್ಕಾರದೊಂದಿಗೆ ಸಮುದಾಯವೂ ಕೈಜೋಡಿಸಿ ಶಾಲೆಗಳನ್ನು ಅಭಿವೃದ್ಧಿಗೆ ಕೈಜೋಡಿಸುತ್ತಿರುವುದು ವಿಶಿಷ್ಟವಾದ ಕಲ್ಪನೆಯಾಗಿದ್ದು, ಇದರಿಂದ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲಿದೆ ಎಂದರು.
ಸರ್ಕಾರಿ ಶಾಲೆ ದತ್ತು ಪಡೆಯುವುದು ಸಾಮಾಜಿಕ ಜವಾಬ್ದಾರಿ. ದೇಶದಲ್ಲಿ ಮೊದಲ ಭಾರಿಗೆ ಜನಪ್ರತಿನಿಧಿಗಳು ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿಗೆ ಮುಂದೆ ಬಂದಿದ್ದಾರೆ. ಸರ್ಕಾರಿ ಶಾಲೆ ದತ್ತು ಪಡೆದ ನಂತರ ಮೂರು ತಿಂಗಳಿಗೆ ಒಮ್ಮೆ, ಆ ಶಾಲೆಗಳಿಗೆ ಭೇಟಿ ಕೊಡಿ. ದತ್ತು ಪಡೆದ ಶಾಲೆ ಯಾವ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ ಗಮನಿಸಿ. ಇಂತಹ ಕಾರ್ಯಕ್ರಮ ಕೊಟ್ಟ ಮೊದಲ ರಾಜ್ಯ ನಮ್ಮದು. ದೇಶದ ಬೇರೆ ರಾಜ್ಯಗಳು ಈ ಕಾರ್ಯಕ್ರಮ ನೋಡುವಂತೆ ಆಗಬೇಕು ಎಂದರು.
2020-21ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ರಾಜ್ಯದ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರು ತಮ್ಮ ಅವಧಿಯಲ್ಲಿ ಕನಿಷ್ಠ ಮೂರು ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದು. ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಮೂಲಕ ಅಭಿವೃದ್ಧಿ ಪಡಿಸುವುದು ಸೇರಿದಂತೆ ರಾಜ್ಯದ 34 ಹೆಚ್ಚು ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳು, ಶಿಕ್ಷಣ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ದತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಿಜಕ್ಕೂ ಪ್ರಶಂಸನೀಯ ಕಾರ್ಯವಾಗಿದೆ ಎಂದರು.
ಈ ಕಾರ್ಯಕ್ರಮ ಸಮುದಾಯದಲ್ಲಿ ಉಳಿದವರಿಗೂ ತಮ್ಮೂರಿನ ಶಾಲೆ ದತ್ತು ಪಡೆದು ಅಭಿವೃದ್ಧಿ ಪಡಿಸಲು ಪ್ರೇರಣೆಯಾಗಲಿದ್ದು, ದೇಶದಲ್ಲಿಯೇ ಒಂದು ಮಾದರಿ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು. ತಾವುಗಳು ಶಾಲೆಗಳನ್ನು ದತ್ತು ಪಡೆಯುವುದಷ್ಟೇ ಅಲ್ಲ, ಆ ನಂತರ ಶಾಲೆಗೆ ಆಗಾಗ್ಗೆ ಭೇಟಿ ನೀಡಿ ಮಕ್ಕಳ ಪೋಷಕರನ್ನು ಶಾಲೆಗೆ ಕರೆಸಿ ಶಿಕ್ಷಣದ ಮಹತ್ವವನ್ನು ಹೇಳುವುದಲ್ಲದೇ ಶಾಲೆಗಳ ಸ್ಥಿತಿಗತಿಗಳನ್ನು ಗಮನಿಸಿ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಪ್ರೇರಣೆಯಾಗಬೇಕು ಎಂದರು.
ಖಾಸಗಿ ಶಾಲೆಗಳಿಗೆ ಸಮಾನವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿ:
ಕೂಲಿ ಕೆಲಸ ಮಾಡುವವರೂ ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ತಮ್ಮ ಆದಾಯದ ಶೇ. 20ರಷ್ಟನ್ನು ಶುಲ್ಕವಾಗಿ ತುಂಬುತ್ತಿದ್ದಾರೆ. ಅವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವುದರಿಂದ ಆ ಶೇ. 20 ಹಣವನ್ನು ತಮ್ಮ ಕುಟುಂಬದ ಇತರ ಸಂಗತಿಗಳಿಗೆ ಬಳಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ನಾವು ಖಾಸಗಿ ಶಾಲೆಗಳಿಗೆ ಸಮಾನವಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸಮುದಾಯದ ಭಾಗಿಯಾಗುವಿಕೆ ನಿಜಕ್ಕೂ ಅತ್ಯಂತ ವೈಶಿಷ್ಟ್ಯ ಪೂರ್ಣವಾದುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ರಾಜ್ಯದಲ್ಲಿ 53 ಸಾವಿರ ಸರ್ಕಾರಿ ಶಾಲೆಗಳಿದ್ದು, ಶೇ. 85ಕ್ಕಿಂತ ಹೆಚ್ಚಿನ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿರುವುದರಿಂದ ಅವುಗಳ ಅಭಿವೃದ್ಧಿಗೆ ಸಮಾಜದ ಸಕ್ರಿಯ ಭಾಗಿಯಾಗುವಿಕೆಯ ಅಗತ್ಯವಿದ್ದು, ಈ ದತ್ತು ಯೋಜನೆಯಿಂದ ಹೆಚ್ಚಿನ ಅನುಕೂಲವಾಗಲಿದೆ. ಸಮುದಾಯ ತಮ್ಮೂರಿನ ಶಾಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಬಂಟ್ವಾಳ ತಾಲೂಕಿನ ದದ್ದಲಕಾಡು ಗ್ರಾಮದ ಶಾಲೆಯನ್ನು ಅಭಿವೃದ್ಧಿಪಡಿಸಿ ಅದನ್ನು ಗ್ರಾಮಸ್ಥರು ಉಳಿಸಿಕೊಂಡಿದ್ದನ್ನು ಉದಾಹರಿಸಿದರು. ತಾವು ಇತ್ತೀಚಿಗೆ ಅಧ್ಯಯನ ಮಾಡಿದ ಇಂಗ್ಲಿಷ್‍ನ ‘ಆರ್ಡಿನರಿ ಪೀಪಲ್ ಎಕ್ಸ್ಟ್ರಾರ್ಡಿನರಿ ಟೀಚರ್ಸ್’ ಎಂಬ ಪುಸ್ತಕ ಸಾರಾಂಶಗಳನ್ನು ಮೆಲುಕು ಹಾಕಿದ ಸುರೇಶ್ ಕುಮಾರ್ ಸರ್ಕಾರಿ ಶಾಲೆಗಳು ಏಕೆ ಅಭಿವೃದ್ಧಿಯಾಗಬೇಕು ಎಂಬುದನ್ನು ಸಚಿವರು ಪ್ರಚುರಪಡಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಸುರೇಶ್ ಕುಮಾರ್, ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐದು ಸರ್ಕಾರಿ ಶಾಲೆಗಳ ಅಭಿವೃದ್ಧಿಪಡಿಸುವ ದತ್ತು ಸ್ವೀಕಾರ ಪ್ರಮಾಣ ಪತ್ರ ಸ್ವೀಕರಿಸಿದರು.
ಯಾರೆಲ್ಲಾ ಸರ್ಕಾರಿ ಶಾಲೆ ದತ್ತು:
ಸಿಎಂ ಯಡಿಯೂರಪ್ಪ ಶಿಕಾರಿಪುರದಲ್ಲಿ 10 ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕಾರ ಪಡೆದಿದ್ದರೆ, ಡಿಸಿಎಂ ಗೋವಿಂದ ಕಾರಜೋಳ 5 , ಶ್ರೀರಾಮಲು 5 , ಮತ್ತು ಸುರೇಶ್ ಕುಮಾರ್ 5 ತಮ್ಮ ತಮ್ಮ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದರು.
ಧರ್ಮಸ್ಥಳ ವಿವಿ 10 ಶಾಲೆಗಳು, ಎಂಎಲ್ಸಿ ನಂಜುಂಡೇಗೌಡ 5, ಮೈಸೂರು ಕುಲಪತಿಗಳು 10 ಶಾಲೆ, ರಾಜೀವ್ ಗಾಂಧಿ ವಿವಿ ಕುಲಪತಿ 10, ರಾಣಿ ಚೆನ್ನಮ್ಮ ವಿವಿ 10 ಶಾಲೆ, ತುಮಕೂರು ವಿವಿ 10 ಶಾಲೆ, ವಿಶ್ವೇಶ್ವರಯ್ಯ ವಿವಿ ಬೆಳಗಾವಿ 10 ಮತ್ತು ಆದಿ ಚುಂಚನಗಿರಿ ವಿವಿ 19 ಶಾಲೆಗಳನ್ನು ದತ್ತು ಪಡೆದಿದ್ದಾರೆ.
ಇದನ್ನು ಓದಿ: ಚೇತರಿಕೆ ಪ್ರಮಾಣ ಹೆಚ್ಚಿದೆ ಎಂದು ಅಸಡ್ಡೆ ಬೇಡ: ಪ್ರಧಾನಿ ಮೋದಿ ಎಚ್ಚರಿಕೆ