ಬೆಂಗಳೂರು: ನಗರದಲ್ಲಿ ವೇಗವಾಗಿ ಹರಡುತ್ತಿರುವ ಕೋವಿಡ್-19 ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಬಿಬಿಎಂಪಿಗೆ 300 ಕೋಟಿ ರೂ. ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಅನುದಾನ ಬಿಡುಗಡೆ ಮಾಡುವಂತೆ ಬಿಬಿಎಂಪಿ ಆಯುಕ್ತರು ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು. ಈ ಸಂಬಂಧ ಇದೀಗ 300 ಕೋಟಿ ರೂ. ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯ ನಿಯಂತ್ರಣ ಕಾರ್ಯಕ್ಕೆ ನೇಮಿಸಿಕೊಂಡಿರುವ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ವೇತನ, ಆಂಬ್ಯುಲೆನ್ಸ್ ವಾಹನಗಳ ಬಾಡಿಗೆ ಮತ್ತು ತುರ್ತು ಖರೀದಿಸಲಾದ ಸಾಮಾಗ್ರಿಗಳು ಮತ್ತು ಬಾಕಿ ಬಿಲ್ಲುಗಳ ಪಾವತಿ ಉದ್ದೇಶಕ್ಕಾಗಿ 300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಬಿಬಿಎಂಪಿ ಆಯುಕ್ತರು ಏಪ್ರಿಲ್ 8ರಂದು ಪತ್ರ ಬರೆದು, ಕೋವಿಡ್-19 ನಿರ್ಮೂಲನೆಗಾಗಿ ವಾರ್ ರೂಂ ಸೃಜಿಸಿ, ಸೋಂಕಿತರ ಮೇಲ್ವಿಚಾರಣೆ, ಸೂಕ್ತ ಔಷಧೋಪಚಾರ, ಬಾಧಿತ ವ್ಯಕ್ತಿಗಳ ಗುರುತಿಸುವಿಕೆ, ಎಲ್ಲಾ ರಸ್ತೆಗಳಿಗೆ ಔಷಧಿ ಸಿಂಪಡಣೆ, ಕ್ಯಾರಂಟೈನ್ ಮಾಡುವ ಸಲುವಾಗಿ ಹೋಟೆಲ್, ಕಲ್ಯಾಣ ಮಂಟಪ, ಹಾಸ್ಟೆಲ್ಗಳನ್ನು ನಿಗದಿ ಮಾಡುವುದು.
ಸೋಂಕು ವ್ಯಾಪಿಸದಂತೆ ಸೀಲ್ ಡೌನ್, ತಪಾಸಣೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಬಾಧಿತ ವ್ಯಕ್ತಿಗಳನ್ನು ಗುರುತಿಸುವ ಸಲುವಾಗಿ ಆರೋಗ್ಯ ಸಮೀಕ್ಷೆಯನ್ನು ಕೈಗೊಳ್ಳುವುದು.
ಆರ್ಟಿಸಿಪಿಆರ್ ಪರೀಕ್ಷೆಗಳನ್ನು ನಡೆಸುವುದು ಹಾಗೂ ಮಾರ್ಚ್ 2021ರ ಅಂತ್ಯಕ್ಕೆ ಖಾಸಗಿ ಪ್ರಯೋಗಾಲಯಗಳಿಗೆ ಬಿಲ್ಲು ಪಾವತಿ, ಪಾಲಿಕೆಯ 8 ವಲಯಗಳು ಕೋವಿಡ್ ನಿರ್ವಹಣೆಯಲ್ಲಿ ಕಾರ್ಯಪ್ರವೃತ್ತರಾಗಿದ್ದು, ಕ್ಯಾರಂಟೈನ್ ಹೋಟೆಲ್ ಬಿಲ್ಲುಗಳು, ಪಿಪಿಇ ಕಿಟ್, ಸೋಂಕಿತರಿಗೆ ಆಹಾರ ಸರಬರಾಜು, ವಲಸೆ ಕಾರ್ಮಿಕರಿಗೆ ಊಟ ಹಾಗೂ ವಸತಿ ತರಬೇತಿ, ನಿಯಂತ್ರಣ ಕಾರ್ಯಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿರುವ ಅರೆವೈದ್ಯಕೀಯ ಸಿಬ್ಬಂದಿ ವೇತನ, ಆಂಬ್ಯುಲೆನ್ಸ್ ವಾಹನಗಳ ಬಾಡಿಗೆ ಮತ್ತು ತುರ್ತು ಖರೀದಿಸಲಾದ ಸಾಮಾಗ್ರಿಗಳ ಬಾಕಿ ಇರುವ ಬಿಲ್ಗಳ ಪಾವತಿಗೆ ಹೆಚ್ಚುವರಿಯಾಗಿ 300 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದರು.