ಬೆಂಗಳೂರು: ವಿನೂತನ ಮಾದರಿ ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಕುರಿತು ರಾಜ್ಯಪಾಲರ ಆದೇಶದ ಅನುಸಾರ ಶಿಕ್ಷಣ ಇಲಾಖೆ ಬಾಗಲಕೋಟೆ ವಿಶ್ವವಿದ್ಯಾಲಯ ಆರಂಭಿಸುವ ನೂತನ ಆದೇಶ ಹೊರಡಿಸಿದೆ.
2022-23 ನೇ ಸಾಲಿನ ಆಯವ್ಯಯ ಘೋಷಣೆಯಲ್ಲಿನ ಕಂಡಿಕೆ 103 ರಲ್ಲಿ ಈ ಬಗ್ಗೆ ವಿವರ ನೀಡಲಾಗಿದೆ. ಕಾಲೇಜುಗಳ ಮೇಲ್ವಿಚಾರಣೆಯನ್ನು ಸುಧಾರಿಸಲು ರಾಜ್ಯದ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಮಾದರಿಯ 7 ವಿಶ್ವವಿದ್ಯಾಲಯಗಳನ್ನು ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸ್ಥಾಪಿಸಲಾಗುವುದು.
ಈ ವಿಶ್ವವಿದ್ಯಾಲಯಗಳು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೇ ಕಾರ್ಯನಿರ್ವಹಿಸಲಿದೆ. ಸ್ನಾತಕೋತ್ತರ ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸುವ ಈ ವಿಶ್ವವಿದ್ಯಾಲಯಗಳಿಗೆ ವಾರ್ಷಿಕ ತಲಾ 2 ಕೋಟಿ ರೂ.ಗಳ ಆವರ್ತಕ ವೆಚ್ಚ ಬಳಸಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಲಾಗಿದೆ.
ನ.5ರ ಆದೇಶದಲ್ಲಿ, 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾದಂತೆ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೇ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸ್ಥಾಪನೆಗೊಂಡಿರುವ ವಿನೂತನ ಮಾದರಿಯ 7 ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸ್ಥಾನವನ್ನು ನಿಗದಿಪಡಿಸಲಾಗಿದೆ.
ಮತ್ತು ಪ್ರಸ್ತುತ ಏಕಾತ್ಮಕ ಸ್ವರೂಪದ ವಿಶ್ವವಿದ್ಯಾಲಯವಾಗಿರುವ ಮಂಡ್ಯ ವಿಶ್ವವಿದ್ಯಾಲಯವನ್ನು ಸಂಯೋಜಿತ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸುವ ಸಂಬಂಧ ಆರ್ಥಿಕ, ಭೌತಿಕ ಹಾಗೂ ಮಾನವ ಸಂಪನ್ಮೂಲಗಳ ಕುರಿತಂತೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಆದೇಶಿಸಿದೆ.
ನ.8ರ ತಿದ್ದುಪಡಿ ಆದೇಶ ಭಾಗ-2ರಲ್ಲಿ ತಾತ್ಕಾಲಿಕವಾಗಿ ಕೆಳಕಂಡಂತೆ ಪ್ರತಿಯೋಜಿಸಲಾಗಿರುತ್ತದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಬಾಗಲಕೋಟೆಯಲ್ಲಿದ್ದು ಕೇಂದ್ರ ಸ್ಥಾನವನ್ನು ಕೂಡಲೇ ನಿರ್ಧರಿಸಿ ತಿಳಿಸಲಾಗುವುದು ಎಂದು ಹೇಳಲಾಗಿದೆ. ಹಾಗೂ ಭಾಗ-2ರ ಪರಿಷ್ಕರಣೆಯ ತತ್ಪರಿಣಾಮವಾಗಿ ಸರ್ಕಾರದ ಆದೇಶದಲ್ಲಿನ ಷರತ್ತುಗಳು ಬಾಗಲಕೋಟೆ ವಿಶ್ವವಿದ್ಯಾಲಯ ಕೇಂದ್ರ ಸ್ಥಾನವನ್ನು ನಿರ್ಧರಿಸುವವರೆಗೆ ಮಾತ್ರ ಯಥೋಚಿತ ಬದಲಾವಣೆಗೆ ಒಳಪಟ್ಟಿರುತ್ತದೆ ಎಂದು ಆದೇಶಿಸಿದೆ ಎಂದು ಹೇಳಲಾಗಿದೆ.
ಪ್ರಸ್ತುತ ನೂತನ ಬಾಗಲಕೋಟೆ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರವು ಜಮಖಂಡಿಯಲ್ಲಿರುವ ಹಿನ್ನೆಲೆಯಲ್ಲಿ ನೂತನ ಬಾಗಲಕೋಟೆ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನವನ್ನು ಜಮಖಂಡಿಯಲ್ಲಿ ಸ್ಥಾಪಿಸಲು ನಿರ್ಧರಿಸಿದ್ದು, ಅದರಂತೆ ಆದೇಶ ಹೊರಡಿಸಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾದಂತೆ, ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೇ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ, ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಿಂದ ಬೇರ್ಪಟ್ಟ ನೂತನ ಬಾಗಲಕೋಟೆ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನವನ್ನು ಜಮಖಂಡಿ, ಬಾಗಲಕೋಟೆ ಜಿಲ್ಲೆಯಲ್ಲಿ ಸ್ಥಾಪಿಸಲು ಆದೇಶಿಸಿದೆ.
ಷರತ್ತುಗಳು ಯಥಾವತ್ತಾಗಿ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೂ ಅನ್ವಯಿಸುತ್ತದೆ. ಈ ನೂತನ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ಮಾತ್ರ ವಿಶ್ವವಿದ್ಯಾಲಯವಾದ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಿಂದ ವರ್ಗಾವಣೆ ಆಗಬೇಕಾಗಿರುವ ಜಮೀನಿನ ದಾಖಲೆಗಳನ್ನು ಒಂದು ತಿಂಗಳೊಳಗಾಗಿ ಮಾತ್ರ ವಿಶ್ವವಿದ್ಯಾಲಯದ ಕುಲಸಚಿವರು (ಆಡಳಿತ), ಇವರು ವರ್ಗಾಯಿಸತಕ್ಕದ್ದು.
ಹಾಗೂ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು ಜಮೀನಿನ ವರ್ಗಾವಣೆಗೆ ಸಂಬಂಧಿಸಿದಂತೆ ಅಗತ್ಯ ಸಹಕಾರ ನೀಡುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ತಾತ್ಕಾಲಿಕ ತಡೆ