ಬೆಂಗಳೂರು: ದೀಪಾವಳಿ ಹಬ್ಬದ ಕೊನೆ ದಿನವಾದ ಬಲಿಪಾಡ್ಯಮಿ ಆಚರಣೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ಸಂಜೆ 5:30 ಯಿಂದ 6:30ಯ ಗೋಧೂಳಿ ಲಗ್ನದಲ್ಲಿ ಗೋಪೂಜೆಯನ್ನ ನಡೆಸಲು ಆದೇಶಿಸಿದೆ.
ಸನಾತನ ಹಿಂದೂ ಧರ್ಮದ ಸಂಪ್ರದಾಯವನ್ನು ಉಳಿಸಿ, ಬೆಳಸುವ ನಿಟ್ಟಿನಲ್ಲಿ ದೀಪಾವಳಿಯ ಬಲಿಪಾಡ್ಯಮಿಯ ಹಬ್ಬದ ದಿನದಂದು "ಗೋಪೂಜೆ" ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಯ ಇಲಾಖೆ ಹೊರಡಿಸಿರುವ ಆದೇಶ ಇದಾಗಿದ್ದು, ಅನಾದಿಕಾಲದಿಂದಲೂ ಹಿಂದೂ ಧರ್ಮದವರು ಭಾರತ ದೇಶದಲ್ಲಿ ಗೋಮಾತೆಯನ್ನು ಕಾಲ ಕಾಲಕ್ಕೆ ಅನುಗುಣವಾಗಿ ಪೂಜಿಸಿಕೊಂಡು ಬರುತ್ತಿದ್ದಾರೆ.
ಹಿಂದೂಗಳು ದೀಪಾವಳಿಯ (ಬಲಿಪಾಡ್ಯಮಿಯ) ದಿನದಂದು ಗೋವುಗಳಿಗೆ ಸ್ನಾನ ಮಾಡಿಸಿ, ಅರಿಶಿಣ, ಕುಂಕುಮ, ಹೂವುಗಳಿಂದ ಅಲಂಕರಿಸಿ, ಅಕ್ಕಿ ಬೆಲ್ಲ, ಸಿಹಿ ತಿನಿಸುಗಳನ್ನು ನೀಡಿ ಕೊಟ್ಟು ಪೂಜಾದಿಗಳನ್ನು ನಡೆಸಿಕೊಂಡು ಬರುತ್ತಿರುವುದನ್ನು ಈಗಲೂ ಕಾಣಬಹುದಾಗಿದೆ. ಅದರಂತೆ ಕರ್ನಾಟಕದಲ್ಲಿಯೂ ಸಹ ಗೋಪೂಜೆಯನ್ನು ಬಲಿಪಾಡ್ಯಮಿಯಂದು ನಡೆಸಿಕೊಂಡು ಬರಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಪಟ್ಟಣ, ಮಹಾನಗರಗಳಲ್ಲಿ ವಾಸಿಸುವ ಜನರು ಗೋಪೂಜೆಯನ್ನು ಮರೆತು ಬಿಡುತ್ತಿದ್ದಾರೆ. ಈ ಕಾರಣಕ್ಕಾಗಿ ಹಿಂದೂ ಸನಾತನ ಧರ್ಮದ ಗೋಮಾತೆಯನ್ನು ದೇವತೆಯೆಂದು ತಿಳಿದು ಪೂಜಿಸುವ ಸಂಪ್ರದಾಯ/ ಪದ್ಧತಿ ಬಿಡಬಾರದೆಂಬ ದೃಷ್ಟಿಯಿಂದ ಮುಂದಿನ ಪೀಳಿಗೆಗೆ ಗೋವುಗಳ ಪೂಜೆಯನ್ನು ಪರಿಚಯಿಸಿ ಸತ್ಪಪ್ರದಾಯ ಮುಂದುವರೆಸುವ ದೃಷ್ಠಿಯಿಂದ ಈ ಆದೇಶ ಮಾಡಲಾಗಿದೆ.
ವರ್ಷದಲ್ಲಿ ಒಂದು ದಿನವಾದರೂ ಗೋವುಗಳ ಪೂಜೆಯನ್ನು ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ದೇವಾಲಯಗಳಲ್ಲಿ ಸಂಸ್ಥೆಗಳಲ್ಲಿ ದೀಪಾವಳಿಯ ಮತ್ತು ಬಲಿಪಾಡ್ಯಮಿಯ ದಿನದಂದು ಕಡ್ಡಾಯವಾಗಿ ನಡೆಸಬೇಕು. ಸನಾತನ ಹಿಂದೂ ಧರ್ಮದ ಗೋಪೂಜಾ ವಿಧಿ - ವಿಧಾನಗಳನ್ನು, ಸಂಪ್ರದಾಯವನ್ನು ಉಳಿಸಿ, ಬೆಳಸುವ ನಿಟ್ಟಿನಲ್ಲಿ ದೀಪಾವಳಿಯ ಬಲಿಪಾಡ್ಯಮಿಯ ಹಬ್ಬದ ದಿನದಂದು "ಗೋಪೂಜೆ" ನಡೆಸಿ ಜಾರಿಗೊಳಿಸುವುದು ಸೂಕ್ತ ಹಾಗೂ ಶಾಸ್ತ್ರ ಸಮ್ಮತ ಆಗಿರುತ್ತದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಆದ್ದರಿಂದ ಮುಂಬರುವ ದೀಪಾವಳಿಯ/ಬಲಿಪಾಡ್ಯಮಿ ದಿನದಂದು ರಾಜ್ಯದ ಎಲ್ಲ ಅಧಿಸೂಚಿತ ದೇವಾಲಯ/ಸಂಸ್ಥೆಗಳಲ್ಲಿ ಗೋವುಗಳನ್ನು ಪೂಜಿಸುವ ವಿಚಾರವಾಗಿ, ಆದಿನ ಗೋವುಗಳಿಗೆ ಸ್ನಾನ ಮಾಡಿಸಿ, ದೇವಾಲಯಕ್ಕೆ ಕರೆತಂದು ಅರಿಶಿಣ, ಕುಂಕುಮ, ಹೂವುಗಳಿಂದ ಅಲಂಕರಿಸಿ, ಅಕ್ಕಿ ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು ಮುಂತಾದ ಗೋಗ್ರಾಸವನ್ನು ಹಸುವಿಗೆ ನೀಡಿ ತಿನ್ನಿಸಿ ಧೂಪ, ದೀಪಗಳಿಂದ ಪೂಜಿಸಿ ನಮಸ್ಕರಿಸುವ ವ್ಯವಸ್ಥೆ ಮಾಡುವ ಮೂಲಕ ಸದರಿ ಈ ದಿನದಂದು ಸಂಜೆ 5:30 ರಿಂದ 30ರ ವರೆಗೆ ಗೋಧೂಳಿ +ಲಗ್ನದಲ್ಲಿ ಗೋಪೂಜೆ ಕಾರ್ಯಕ್ರಮ ನಡೆಸಲು ತಿಳಿಸಿದೆ.