ಬೆಂಗಳೂರು: ಖಾಸಗಿ ಆಸ್ಪತ್ರೆಯವರು ಸರ್ಕಾರದ ನಿಯಮದಂತೆ ಬೆಡ್ ಗಳನ್ನು ಬಿಟ್ಟುಕೊಡಲೇಬೇಕು. ಬೆಡ್ ನೀಡದ ಖಾಸಗಿ ಆಸ್ಪತ್ರೆಗಳ ಜೊತೆ ಇಂದು ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಈಗಿನ ಲಾಕ್ಡೌನ್ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಸಿಎಂ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ ಸಭೆ ಕರೆದಿದ್ದೇವೆ. ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಕೊಡಬೇಕಾದ 5000 ಬೆಡ್ ಕೊಡಲೇಬೇಕು. ಮೊದಲು ಒಪ್ಪಿಕೊಂಡಿದ್ದ ಆಸ್ಪತ್ರೆಗಳು ಈಗ ಇಲ್ಲದ ಸಬೂಬು ಹೇಳಿಕೊಂಡು ಬರುತ್ತಿದ್ದಾರೆ. ಹಾಗಾಗಿ ಅವರೊಂದಿಗೆ ಹಾಗೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಖಾಸಗಿ ಮೆಡಿಕಲ್ ಕಾಲೇಜುಗಳ ಜೊತೆಗೂ ನಾಳೆ ಸಭೆ ನಡೆಸಲಾಗುತ್ತದೆ ಎಂದರು.
ರೋಗಲಕ್ಷಣ ಇಲ್ಲದ ಕೊರೊನಾ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಪ್ಯಾಕೇಜ್ ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ವಿಷಯ ಸರ್ಕಾರದ ಗಮನಕ್ಕೂ ಬಂದಿದೆ. ಗುಣಲಕ್ಷಣಗಳಿಲ್ಲದವರನ್ನು ಖಾಸಗಿ ಆಸ್ಪತ್ರೆಗಳಲ್ಲಿ ಇಟ್ಟುಕೊಳ್ಳುವಂತಿಲ್ಲ. ಕೂಡಲೇ ಅಂತಹ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಇಂದೇ ಆದೇಶ ಹೊರಡಿಸಲಿದ್ದಾರೆ ಎಂದರು.
ಈಗಾಗಲೇ ಎಲ್ಲೆಲ್ಲಿ ಸೀಲ್ ಡೌನ್ ಮಾಡಬೇಕು ಅಲ್ಲೆಲ್ಲಾ ಮಾಡಿದ್ದೇವೆ ಹಾಗೂ ಈ ಪ್ರಕ್ರಿಯೆ ಜಾರಿಯಲ್ಲಿದೆ. ಎಲ್ಲಾ ಕಡೆ ಸೂಕ್ತ ಪರೀಕ್ಷೆಗಳು ಆಗಬೇಕು. ಬೆಡ್, ವೆಂಟಿಲೇಟರ್ ಅಗತ್ಯ ಸಾಮಗ್ರಿಗಳ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಿದೆ ಎಂದರು.
ಒಂದು ತಿಂಗಳ ಮಗು ಬೆಡ್ ಸಿಗದೆ ಅಮಾನವೀಯವಾಗಿ ಸಾವನ್ನಪ್ಪಿದ ವಿಚಾರವನ್ನು ಸಚಿವ ಸುರೇಶ್ ಕುಮಾರ್ ಅವರೇ ಸಭೆಯಲ್ಲಿ ಪ್ರಸ್ತಾಪಿಸಿ ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ಸೂಚನೆಯನ್ನು ಕೊಡಲು ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದೇವೆ. ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ ಎಂದರು.
ವಾರದ ನಂತರ ಫ್ರೀಡೌನ್ ನಿಯಮ ಅನ್ವಯ:
ಒಂದು ವಾರದ ನಂತರ ಮತ್ತೆ ಲಾಕ್ ಡೌನ್ ಮುಂದುವರೆಸುವುದಿಲ್ಲ. ಈ ಸಂಬಂಧ ಸಿಎಂ ತಜ್ಞರ ವರದಿ ಪಡೆದಿದ್ದಾರೆ. ಲಾಕ್ ಡೌನ್ ಮುಂದುವರೆಸುವ ಕೆಲಸದಿಂದ ಬರೀ ಸೋಂಕು ಮುಂದೂಡಬಹುದು ಅಷ್ಟೇ, ಅದು ಪರಿಹಾರವಲ್ಲ. ಹಾಗಾಗಿ ಮತ್ತೆ ಲಾಕ್ ಡೌನ್ ವಿಸ್ತರಣೆ ಮಾಡಲ್ಲ. ಒಂದು ವಾರದ ಲಾಕ್ ಡೌನ್ ಬಳಿಕ ಮತ್ತೆ ಈ ಹಿಂದೆ ಅನ್ಲಾಕ್ ಸಂದರ್ಭದಲ್ಲಿ ಇದ್ದ ಕಾನೂನುಗಳೇ ಮುಂದುವರೆಯುತ್ತದೆ ಎಂದು ಅಶೋಕ್ ಸ್ಪಷ್ಟಪಡಿಸಿದರು.