ಬೆಂಗಳೂರು: ಕಳೆದ ವರ್ಷ ರಾಜ್ಯದಲ್ಲಿ ನಡೆದ ವಿವಿಧ ಪ್ರತಿಭಟನೆಗಳ ವೇಳೆ ಉಂಟಾದ ಸಾರ್ವಜನಿಕ ಆಸ್ತಿ ನಷ್ಟ ಅಂದಾಜಿಸಲು ಹಾಗೂ ವಸೂಲಿ ಮಾಡಲು ನೇಮಕಗೊಂಡಿರುವ ಇಬ್ಬರು ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ (ಕ್ಲೇಮು ಕಮೀಷನರ್ ಗಳಿಗೆ) ಮೂಲ ಸೌಕರ್ಯ ಕಲ್ಪಿಸಿದ ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಮಹಾದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ 2018ರಲ್ಲಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಬಂದ್ಗೆ ಕರೆ ನೀಡಿದ್ದರು. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ವಿರೋಧಿಸಿ 2019ರಲ್ಲಿ ರಾಮನಗರ, ಕನಕಪುರದಲ್ಲಿ ನಡೆದ ಬಂದ್ನಿಂದ ಆಗಿರುವ ಸಾರ್ವಜನಿಕ ಆಸ್ತಿ ನಷ್ಟ ವಸೂಲಿ ಕೋರಿ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಇದನ್ನೂ ಓದಿ: ಕ್ರೀಡಾ ಇಲಾಖೆ ಪುನಶ್ಚೇತನಕ್ಕೆ ಸಾವಿರ ಕೋಟಿ ಅನುದಾನಕ್ಕೆ ಪ್ರಸ್ತಾವನೆ: ಸಚಿವ ನಾರಾಯಣ ಗೌಡ
ವಿಚಾರಣೆ ವೇಳೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಮಹಾದಾಯಿ ಬಂದ್ ಪ್ರಕರಣದಲ್ಲಿನ ನಷ್ಟ ಪ್ರಮಾಣ ಅಂದಾಜಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಮಹ್ಮದ್ ಗೌಸ್ ಎಂ. ಪಟೇಲ್ ಹಾಗೂ ಡಿ.ಕೆ. ಶಿವಕುಮಾರ್ ಸಂಬಂಧ ನಡೆದ ಪ್ರತಿಭಟನೆಯ ನಷ್ಟ ಪ್ರಮಾಣ ಅಂದಾಜಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿ.ಆರ್ ಬೆನಕನಹಳ್ಳಿ ಅವರಿಗೆ ಮೂಲ ಸೌಕರ್ಯ ಕಲ್ಪಿಸಲು ಹೈಕೋರ್ಟ್ 2020ರ ಫೆ.25ರಂದು ಆದೇಶಿಸಿತ್ತು. ಆದರೆ, ಈ ಆದೇಶ ಪಾಲನೆಗೆ ಸಂಬಂಧಿಸಿದಂತೆ ಸರ್ಕಾರ ಮಾಹಿತಿಯನ್ನೇ ನೀಡಿಲ್ಲ ಎಂದಿತು. ಅಲ್ಲದೇ, ಸರ್ಕಾರದ ಪ್ರಮಾಣಪತ್ರವನ್ನು ತಿರಸ್ಕರಿಸಿದ ಪೀಠ, ಏ.14ರೊಳಗೆ ಸಮರ್ಪಕ ಪ್ರಮಾಣಪತ್ರ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.