ಬೆಂಗಳೂರು: ಪ್ರತ್ಯೇಕವಾಗಿ ಮುಸ್ಲಿಂ ಕಾಲೇಜುಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿಲ್ಲ. ರಾಜ್ಯ ಸರ್ಕಾರದಿಂದಲೇ ಮುಸ್ಲಿಂ ಕಾಲೇಜು ಸ್ಥಾಪಿಸುವ ಯಾವುದೇ ಉದ್ದೇಶ ಇಲ್ಲ. ಇಂತಹ ಯಾವುದೇ ಪ್ರಸ್ತಾವನೆ ಕೂಡ ಸರ್ಕಾರದ ಮುಂದೆ ಇಲ್ಲ ಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಖಾಸಗಿ ವಾಹಿನಿಗೆ ಈ ಮಾಹಿತಿ ನೀಡಿರುವ ಅವರು, ಸರ್ಕಾರದ ಮುಂದೆ ಈ ರೀತಿಯ ಚಿಂತನೆ ಇಲ್ಲ ಹಾಗೇ ಪ್ರಸ್ಥಾವನೆಯೂ ಬಂದಿಲ್ಲ. ಪ್ರತ್ಯೇಕವಾಗಿ ಮುಸ್ಲಿಂ ಕಾಲೇಜುಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ 10 ಭಾಗಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ವಿಶೇಷ ಕಾಲೇಜುಗಳನ್ನು ಸ್ಥಾಪಿಸಲಾಗುತ್ತದೆ. ಮುಂದಿನ ತಿಂಗಳಲ್ಲಿ ಈ ಕಾಲೇಜುಗಳ ನಿರ್ಮಾಣಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ಹಿಜಾಬ್ ವಿಚಾರ ದೊಡ್ಡ ವಿವಾದ ಸೃಷ್ಟಿಸಿದ ಬಳಿಕ ಮುಸ್ಲಿಂ ಹೆಣ್ಣು ಮಕ್ಕಳು ಶಾಲಾ - ಕಾಲೇಜಿಗೆ ಬರುವುದನ್ನು ನಿಲ್ಲಿಸಿದ್ದಾರೆ.
ಸಾಕಷ್ಟು ವಿದ್ಯಾರ್ಥಿನಿಯರು ಶಿಕ್ಷಣದಿಂದ ದೂರವಿದ್ದಾರೆ. ಭವಿಷ್ಯದಲ್ಲಿ ಶಿಕ್ಷಣದಿಂದ ವಂಚಿತರಾಗಿ ಇವರು ಸಾಕಷ್ಟು ಸಮಸ್ಯೆ ಎದುರಿಸುವ ಸಾಧ್ಯತೆ ಇರುವ ಹಿನ್ನೆಲೆ ರಾಜ್ಯದ ವಿವಿಧಡೆ 10 ಕಾಲೇಜುಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಕೆಲ ಮೂಲಗಳು ಮಾಹಿತಿ ನೀಡಿದ್ದವು.
3 ತಿಂಗಳ ಹಿಂದೆಯೇ ವಕ್ಫ್ ಬೋರ್ಡ್‌ನಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಒಂದೂವರೆ ತಿಂಗಳ ಹಿಂದೆಯೇ ಅನುಮೋದನೆ ದೊರೆತು ಪ್ರತಿ ಕಾಲೇಜಿಗೆ 2.50 ಕೋಟಿ ರೂ. ಅನುದಾನವನ್ನೂ ಮೀಸಲಿಟ್ಟಿದೆ. ರಾಜ್ಯ ಸರ್ಕಾರ ವಕ್ಫ್ ಬೋರ್ಡ್‌ಗೆ ನೀಡುವ ಅನುದಾನದಲ್ಲೇ ಈ ವೆಚ್ಚವನ್ನು ಭರಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿದ್ದವು.
ಇದಕ್ಕೆ ಹಿಂದೂ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಶಿಕ್ಷಣ ಸಚಿವರು ನೀಡಿರುವ ಪ್ರತಿಕ್ರಿಯೆಯಲ್ಲಿ ಪ್ರತ್ಯೇಕ ಕಾಲೇಜು ಸ್ಥಾಪಿಸುವ ಯಾವ ಉದ್ದೇಶವೂ ಇಲ್ಲ ಎಂಬ ಮಾಹಿತಿ ಲಭಿಸಿದೆ.
ಇದನ್ನೂ ಓದಿ: ಹಿಜಾಬ್ ವಿಚಾರವಾಗಿ ಸುಪ್ರೀಂಕೋರ್ಟ್ ಮುಂದೆ ನೀಡುವ ತೀರ್ಪಿಗಾಗಿ ಸರ್ಕಾರ ಕಾಯಲಿದೆ : ನಾಗೇಶ್