ಬೆಂಗಳೂರು: ವ್ಯಕ್ತಿಯೊಬ್ಬರ ನಿವೇಶನದಲ್ಲಿ ಶೆಡ್ ನಿರ್ಮಾಣಕ್ಕಾಗಿ ಅನುಮತಿ ನೀಡಲು ಲಂಚ ಪಡೆದ ಸರ್ಕಾರಿ ಅಧಿಕಾರಿಯೊಬ್ಬರಿಗೆ ಸೇವೆಯಿಂದ ಕಡ್ಡಾಯ ನಿವೃತ್ತಿ ಶಿಕ್ಷೆ ನೀಡಿದ್ದ ನಗರಾಭಿವೃದ್ಧಿ ಇಲಾಖೆಯ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಪಟ್ಟಣ ಪುರಸಭೆ ಕಚೇರಿಯಲ್ಲಿ ದ್ವಿತೀಯ ಸಹಾಯಕ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಆರ್.ನರಸಿಂಹಲು ಅವರನ್ನು ಲಂಚ ಆರೋಪದಲ್ಲಿ ಕಡ್ಡಾಯ ನಿವೃತ್ತಿಗೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಆದೇಶಿಸಿದ್ದರು.
ಈ ಆದೇಶ ಪ್ರಶ್ನಿಸಿ ನರಸಿಂಹಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಕಡ್ಡಾಯ ನಿವೃತ್ತಿ ಆದೇಶ ರದ್ದು ಪಡಿಸುವಂತೆ ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರು ನಗರಾಭಿವೃದ್ಧಿ ಇಲಾಖೆಯ ಆದೇಶದಲ್ಲಿ ಯಾವುದೇ ದೋಷಗಳು ಕಂಡುಬಂದಿಲ್ಲ ಎಂದು ಅಭಿಪ್ರಾಯ ಪಟ್ಟು ಅರ್ಜಿಯನ್ನು ವಜಾಗೊಳಿಸಿದ್ದರು.
ಪ್ರಕರಣದ ಸಂಪೂರ್ಣ ವಿವರ: ಆರ್.ನರಸಿಂಹಲು ಅವರಲ್ಲಿ ಬಸವರಾಜ ಸಂಗಪ್ಪ ಗಾಣಿಗೇರ ಎಂಬುವರು ತಮ್ಮ ನಿವೇಶನದಲ್ಲಿ ಶೆಡ್ ನಿರ್ಮಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. ಅನುಮತಿ ನೀಡಲು 500 ರೂ.ಗಳು ಶುಲ್ಕ ಇದ್ದರೂ 900 ರೂ ಪಡೆದಿದ್ದಾರೆ. ಈ ಸಂಬಂಧ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಲಂಚದ ಹಣ ಪಡೆದ ಬಗ್ಗೆ ಸಂಶಯ ಕಂಡುಬಂದು ನರಸಿಂಹಲು ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.
ಇದೇ ಪ್ರಕರಣವನ್ನು ಅಂದಿನ ಉಪಲೋಕಾಯುಕ್ತರ ಸೂಚನೆ ಮೇರೆಗೆ ಲೋಕಾಯುಕ್ತ ಸಂಸ್ಥೆಯ ತನಿಖಾ ವಿಭಾಗದ ಹೆಚ್ಚುವರಿ ರಿಜಿಸ್ಟ್ರಾರ್-3 ಅವರು ತನಿಖೆ ನಡೆಸಿ ಆರೋಪ ಸಾಬೀತಾಗಿರುವ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಅರ್ಜಿದಾರ ನರಸಿಂಹಲು ಅವರಿಗೆ ಕಡ್ಡಾಯ ನಿವೃತ್ತಿಗೆ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ನರಸಿಂಹಲು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ಅರ್ಜಿ ವಜಾಗೊಳಿಸಿದೆ.
ಇದನ್ನೂಓದಿ:ಲಂಚ ಪಡೆದ ಆರೋಪ: ಪ್ರಭಾರ ಪಿಡಿಒಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ