ಬೆಂಗಳೂರು: ಕೋವಿಡ್ ಹಿನ್ನೆಲೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಾವತಿಸಲಾಗುವ ಆಸ್ತಿ ತೆರಿಗೆ ಮೇಲಿನ ಶೇ.5ರ ರಿಯಾಯಿತಿಯ ಹಾಗೂ ವಿಳಂಬದ ಅವಧಿಗೆ ವಿಧಿಸಲಾಗುವ ದಂಡದ ಕಾಲಾವಧಿಯನ್ನು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ನಗರ ಸ್ಥಳೀಯ ಸಂಸ್ಥೆಗಳು 2021-22ನೇ ಸಾಲಿನ ಆರ್ಥಿಕ ವರ್ಷದ ಆಸ್ತಿ ತೆರಿಗೆ ಪಾವತಿಗೆ ನೀಡಲಾಗುತ್ತಿರುವ ಶೇ.5ರ ರಿಯಾಯಿತಿಯ ಕಾಲಾವಧಿಯನ್ನು ಜೂನ್ 30ರ ವರೆಗೆ ಈಗಾಗಲೇ ವಿಸ್ತರಿಸಿರುವುದನ್ನು ಜುಲೈ 31ರವರೆಗೆ ವಿಸ್ತರಿಸಿದೆ.
ಮತ್ತು ಆಸ್ತಿ ತೆರಿಗೆಯನ್ನು ಪಾವತಿಸದಿದ್ದಲ್ಲಿ ಜುಲೈ ತಿಂಗಳಿನಿಂದ ವಿಳಂಬದ ಅವಧಿಗೆ ವಿಧಿಸಲಾಗುವ ಮಾಸಿಕ ಶೇ. 2ರಷ್ಟು ದಂಡದ ಕಾಲಾವಧಿಯನ್ನು ಜುಲೈ 1ರಿಂದ ಅನ್ವಯಿಸುವ ಬದಲಾಗಿ ಆ.1ರಿಂದ ಅನ್ವಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು/ಮಹಾನಗರ ಪಾಲಿಕೆಗಳಿಗೆ(ಬಿಬಿಎಂಪಿ ಹೊರತು ಪಡಿಸಿ) ಸೂಚಿಸಲಾಗಿದೆ.
ಕೋವಿಡ್ ಎರಡನೇ ಅಲೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆ ಸರ್ಕಾರ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ವ್ಯಾಪಾರ ವಹಿವಾಟುಗಳನ್ನು ಜೂನ್ 14ರವರೆಗೆ ಸ್ಥಗಿತಗೊಳಿಸಲಾಗಿತ್ತು. ಈ ಹಿನ್ನೆಲೆ ಸರ್ಕಾರ ಇದೀಗ ಆಸ್ತಿ ತೆರಿಗೆ ಪಾವತಿಯ ಗಡುವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.