ಬೆಂಗಳೂರು: ಸಿಆರ್ಪಿಎಫ್ ಯೋಧನ ಮೇಲಿನ ಪ್ರಕರಣವನ್ನು ಹಿಂಪಡೆಯುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿರುವ ಗೃಹ ಸಚಿವರು, ಮಾಸ್ಕ್ ಹಾಕದ ವಿಚಾರಕ್ಕೆ ಪೇದೆ-ಸಿಆರ್ಪಿಎಫ್ ಯೋಧನ ಮಧ್ಯೆ ಗಲಾಟೆ ನಡೆದಿತ್ತು. ಕರ್ತವ್ಯನಿರತ ಪೇದೆ ಮೇಲೆ ಹಲ್ಲೆ ಮಾಡಿದ ಆರೋಪದಡಿ ಸಿಆರ್ಪಿಎಫ್ ಯೋಧನ ಬಂಧನವಾಗಿತ್ತು ಎಂದು ಏ. 23ರಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದಿದ್ದ ಘಟನೆಯನ್ನು ಸಚಿವರು ವಿವರಿಸಿದರು. ಅಲ್ಲದೆ ವಸ್ತುನಿಷ್ಠವಾಗಿ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಸಿಆರ್ಪಿಎಫ್ ಯೋಧ ಸಚಿನ್ ಸಾವಂತ್ ಹಾಗೂ ಪೊಲೀಸರ ನಡುವೆ ನಡೆದಿದ್ದ ತಿಕ್ಕಾಟ ಹಾಗೂ ಬಂಧನ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ದೇಶ ಕಾಯುವ ಯೋಧರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಖುದ್ದು ಗೃಹ ಸಚಿವರನ್ನು ಕೂಡ ಈ ವಿಚಾರದಲ್ಲಿ ಎಳೆದು ಅವಹೇಳನ ಮಾಡಿ ಪೋಸ್ಟ್ ಮಾಡಲಾಗಿತ್ತು.
ಚಿಕ್ಕೋಡಿ 1ನೇ ಜೆಎಂಎಫ್‌ಸಿ ನ್ಯಾಯಾಲಯದಿಂದ ಯೋಧನಿಗೆ ಈಗಾಗಲೇ ಜಾಮೀನು ಮಂಜೂರು ಆಗಿದೆ. ಅಲ್ಲದೆ ಕ್ಷುಲ್ಲಕ ಕಾರಣಕ್ಕೆ ಯೋಧನ ಮೇಲೆ ಹಲ್ಲೆ ನಡೆಸಿದ ಹಾಗೂ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಪಿಎಸ್ಐ ಅನಿಲ್ ಕುಂಬಾರ್ ಅವರನ್ನು ಕೂಡ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಯೋಧನ ಕೈಗೆ ಕೋಳ ಹಾಕಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯೋಧನಿಗೆ ಬಾಸುಂಡೆ ಬರುವ ರೀತಿ ಥಳಿಸಲಾಗಿತ್ತು. ಬೆಳಗಾವಿ ಜಿಲ್ಲೆ ಸದಲಗಾ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ವಿಶೇಷವಾಗಿ ಗುರುತಿಸಿಕೊಂಡಿದ್ದ ಯೋಧನ ಬಂಧನ ಪ್ರಕರಣವನ್ನು ಕೈಬಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಇದನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.