ಬೆಂಗಳೂರು: ಈಗಾಗಲೇ ತೈಲ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಇದೀಗ ಮತ್ತೊಂದು ಹೊರೆ ಹಾಕಲು ಮುಂದಾಗಿದೆ. ರಾಜ್ಯದ ಪ್ರಮುಖ 10 ರಾಜ್ಯ ಹೆದ್ದಾರಿಗಳಿಗೆ ಟೋಲ್ ಹಾಕಲು ನಿರ್ಧರಿಸಿದೆ.
ಈಗಾಗಲೇ ತೈಲ ಬೆಲೆ ಏರಿಕೆ ಜನರ ಜೇಬಿಗೆ ಕತ್ತರಿ ಹಾಕಿದೆ. ಈ ಮಧ್ಯೆ ಸರ್ಕಾರ 10 ಪ್ರಮುಖ ರಾಜ್ಯ ಹೆದ್ದಾರಿಗಳಿಗೆ ಟೋಲ್ ಹಾಕಲು ನಿರ್ಧರಿಸಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್ ಡಿಸಿಎಲ್) ಅಭಿವೃದ್ಧಿ ಪಡಿಸಿರುವ 10 ಪ್ರಮುಖ ರಾಜ್ಯ ಹೆದ್ದಾರಿಗಳಿಗೆ ಟೋಲ್ ನಿಗದಿಗೊಳಿಸಲು ಮುಂದಾಗಿದೆ. ಈಗಾಗಲೇ ಈ ಸಂಬಂಧ ಟೋಲ್ ಬೂತ್ ಸ್ಥಾಪಿಸಲು ಇಚ್ಚಿಸುವ ಸಂಸ್ಥೆಗಳಿಂದ ಬಿಡ್ನ್ನು ಆಹ್ವಾನಿಸಿದ್ದು, ಇನ್ನೆರಡು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡು ವಾಹನ ಸವಾರರ ಮೇಲೆ ಟೋಲ್ ಹೊರೆ ಬೀಳಲಿದೆ.
ಪ್ರಸ್ತಾಪಿತ 10 ಟೋಲ್ ರಸ್ತೆಗಳ್ಯಾವುವು?:
- ಶಿವಮೊಗ್ಗ-ಶಿಕಾರಿಪುರ-ಹಾನಗಲ್ ರಸ್ತೆ
- ಸವದತ್ತಿ-ರಾಮದುರ್ಗ-ಬಾದಾಮಿ-ಕಮಟಗಿ ರಸ್ತೆ
- ಬಳ್ಳಾರಿ-ಮೋಕಾ ರಸ್ತೆ
- ತಿಂಥಣಿ-ದೇವದುರ್ಗ-ಕಲ್ಮಲ ರಸ್ತೆ
- ಗುಬ್ಬಿ-ಸಿ.ಎಸ್.ಪುರ-ಬಿರಗೊನಹಳ್ಳಿ ರಸ್ತೆ
- ಯಡಿಯೂರು-ಕೌಡ್ಲೆ ರಸ್ತೆ
- ಹಾನಗಲ್-ತಡಸ್-ಹಾವೇರಿ ರಸ್ತೆ
- ಪಡುಬಿದರಿ-ಕಾರ್ಕಳ ರಸ್ತೆ
- ಹೊಸಕೋಟೆ-ಚಿಂತಾಮಣಿ ರಸ್ತೆ
- ಕೂಡ್ಲಿಗಿ-ಸಂಡೂರು-ತೋರಣಗಲ್ಲು ರಸ್ತೆ
ಸದ್ಯ ಟೋಲ್ ಸಂಗ್ರಹಿಸಲಾಗುತ್ತಿರುವ ರಾಜ್ಯ ಹೆದ್ದಾರಿ:
ಕೆಆರ್ಡಿಸಿಎಲ್ ಸದ್ಯಕ್ಕೆ ಒಟ್ಟು 20 ರಾಜ್ಯ ಹೆದ್ದಾರಿಗಳಿಗೆ ಟೋಲ್ ವಿಧಿಸುತ್ತಿದೆ. ಇದೀಗ 10 ಹೊಸ ರಾಜ್ಯ ಹೆದ್ದಾರಿಗಳಿಗೆ ಟೋಲ್ ವಿಧಿಸಲು ನಿರ್ಧರಿಸಿದೆ. ಈ 10 ಹೊಸ ಹೆದ್ದಾರಿ ರಸ್ತೆಗಳು ಸೇರ್ಪಡೆಗೊಂಡರೆ ಒಟ್ಟು 30 ರಾಜ್ಯ ಹೆದ್ದಾರಿಗಳಲ್ಲಿ ಸರ್ಕಾರ ಟೋಲ್ ಸಂಗ್ರಹಿಸಿದಂತಾಗಲಿದೆ.
ಕೆಆರ್ಡಿಸಿಎಲ್ ಹಾಗೂ ಕೆಶಿಫ್ ಸಂಸ್ಥೆಗಳಿಂದ ಅಭಿವೃದ್ಧಿಪಡಿಸಿರುವ ಧಾರವಾಡ-ಕರಡಿಗುಡ್ಡ-ಸವದತ್ತಿ ರಸ್ತೆ, ಹೊಸಕೋಟೆಯಿಂದ ಚಿಂತಾಮಣಿ ಬೈಪಾಸ್ ರಸ್ತೆ, ಹಾವೇರಿ-ಅಕ್ಕಿಆಲೂರು-ಹಾನಗಲ್ ರಸ್ತೆ, ಮುದೋಳ-ಚಿಕ್ಕೋಡಿ-ನಿಪ್ಪಾಣಿ ರಸ್ತೆ, ಶೆಲ್ವಾಡಿ-ಮುಂಡರಗಿ ರಸ್ತೆ, ಹುಬ್ಬಳ್ಳಿ-ಕುಂದಗೋಳ-ಲಕ್ಷ್ಮೇಶ್ವರ ರಸ್ತೆ, ಮುದಗಲ್-ತಾವರೆಕೆರೆ-ಗಂಗಾವತಿ ರಸ್ತೆ, ಮಾಗಡಿ-ಪಾವಗಡ-ಎಪಿ ಬಾರ್ಡರ್ ರಸ್ತೆ, ಮಳವಳ್ಳಿ-ಮದ್ದೂರು-ಕೊರಟಗೆರೆ ರಸ್ತೆ, ಸಿಂಧನೂರು-ತಾವರೆಕೆರೆ-ಕುಷ್ಟಗಿ ರಾಜ್ಯ ಹೆದ್ದಾರಿಗಳಲ್ಲಿ ರಸ್ತೆಗಳಲ್ಲಿ ಬಳಕೆದಾರರ ಶುಲ್ಕವನ್ನು ಸಂಗ್ರಹಣೆ ಮಾಡಲು 31-03-2017 ರಲ್ಲಿ ಅನುಮೋದನೆ ನೀಡಲಾಗಿದೆ.
ಇನ್ನು ಹುಡ್ಕೋ (HUDCO) ಸಾಲದ ನೆರವಿನಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಹೊಸಪೇಟೆ-ಸಂಡೂರು ರಸ್ತೆಯಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಅದೇ ರೀತಿ ಕೆಆರ್ಡಿಸಿಎಲ್ ವತಿಯಿಂದ ಯಲಹಂಕ-ಆಂಧ್ರ ಪ್ರದೇಶ ಗಡಿ ರಸ್ತೆ, ಗಿಣಿಗೆರೆ-ಗಂಗಾವತಿ ರಸ್ತೆ, ಧಾರವಾಡ-ರಾಮನಗರ ರಸ್ತೆ ಮತ್ತು ವಾಗ್ದಾರಿ-ರಿಬ್ಬನಪಲ್ಲಿ ಪಿಪಿಪಿ-ಡಿಬಿಎಫ್‌ಓಟಿ-ವಿಜಿಎಫ್ ರಸ್ತೆಗಳಲ್ಲಿ ನಿರ್ಮಾಣ ವೆಚ್ಚವನ್ನು ರಿಯಾಯಿತಿದಾರರು ಹೂಡಿಕೆಮಾಡಿ ಅಭಿವೃದ್ಧಿ ಪಡಿಸಿದ್ದು, ಸರ್ಕಾರದ ಅನುಮತಿಯಂತೆ ಸದರಿ ರಸ್ತೆಗಳಲ್ಲಿ ರಿಯಾಯಿತಿದಾರು ನಿರ್ಧಿಷ್ಟ ಅವಧಿಯವರೆಗೆ ಶುಲ್ಕ ವಸೂಲಾತಿ ಮಾಡುತಿದ್ದಾರೆ.
ಇನ್ನು ವಿಶ್ವಬ್ಯಾಂಕ್ ನೆರವಿನೊಂದಿಗೆ ಕೆಆರ್ಡಿಸಿಎಲ್ನಿಂದ ಅಭಿವೃದ್ಧಿಪಡಿಸಲಾದ ಬಾಗೆವಾಡಿ-ಸವದತ್ತಿ ರಸ್ತೆ, ಹಾಸನ-ಪಿರಿಯಾಪಟ್ಟಣ ರಸ್ತೆ, ಹಿರೇಕೆರೂರು-ರಾಣಿಬೆನ್ನೂರು ರಸ್ತೆ ಮತ್ತು ಮುಂಡರಗಿ-ಪರಪ್ಪನಹಳ್ಳಿ ರಸ್ತೆಗಳಲ್ಲಿ ಟೋಲ್ ಸಂಗ್ರಹಕ್ಕೆ 2016ರಲ್ಲಿ ಅನುಮೋದನೆ ನೀಡಲಾಗಿತ್ತು.
ಈ ಎಲ್ಲ ರಾಜ್ಯ ಹೆದ್ದಾರಿಗಳಿಂದ ರಾಜ್ಯ ಸರ್ಕಾರ ಟೋಲ್ ಮೂಲಕ ಫೆಬ್ರವರಿವರೆಗೆ ಸುಮಾರು 29.84 ಕೋಟಿ ರೂ. ಸಂಗ್ರಹಿಸಿದೆ. ಇದೀಗ ಹೊಸ 10 ರಾಜ್ಯ ಹೆದ್ದಾರಿಗಳಲ್ಲಿ ಇನ್ನೆರಡು ತಿಂಗಳಲ್ಲಿ ಟೋಲ್ ಸಂಗ್ರಹ ಪ್ರಾರಂಭವಾಗಲಿದ್ದು, ವಾರ್ಷಿಕ ಸುಮಾರು 40 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆ ಇದೆ.