ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ಸೇವಾ ಸುಧಾರಣೆಗೆ ಸಂಬಂಧಿಸಿದಂತೆ ವಿಷನ್ ಗ್ರೂಪ್ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಜನತೆಗೆ ಅತ್ಯುತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ವಿಷನ್ ಗ್ರೂಪ್ ರಚಿಸಲಾಗಿದೆ.
ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತರುವ ಸಲುವಾಗಿ ಈಗಾಗಲೇ ಹಿಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಮತ್ತು ವೈದ್ಯಕೀಯ ಪದವಿ ಹೊಂದಿರುವ ಶಾಸಕರ ಸಭೆಯನ್ನು ಕರೆದು ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿನ ವಿವಿಧ ಸೇವೆಗಳಿಗೆ ಸಂಬಂಧಿಸಿದಂತೆ ಆಯಾ ಸೇವಾ ಕ್ಷೇತ್ರದಲ್ಲಿ ಪರಿಣತಿ ಹೊಂದಿ ಪ್ರಸಿದ್ಧರಾದ ತಜ್ಞರನ್ನು ಒಳಗೊಂಡಂತೆ ಆ ಸೇವಾ ಕ್ಷೇತ್ರದಲ್ಲಿ ಆಗುತ್ತಿರುವ ನೂತನ ಬೆಳವಣಿಗೆಗಳು ಹಾಗೂ ಆವಿಷ್ಕಾರಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ಇದಲ್ಲದೇ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಮಾಡಬೇಕಾದ ಅಮೂಲಾಗ್ರ ಬದಲಾವಣೆಗಳ ಬಗ್ಗೆ ಸರ್ಕಾರಕ್ಕೆ ಕಾಲಕಾಲಕ್ಕೆ ಸಲಹೆ ಹಾಗೂ ಶಿಫಾರಸುಗಳನ್ನು ಮಾಡುವ ಧ್ಯೇಯ ಹೊಂದಿರುವ ಒಂದು "ವಿಷನ್ ಗ್ರೂಪ್' ರೂಪಿಸಲು ಯೋಜಿಸಲಾಗಿದ್ದು, ಚರ್ಚೆಯ ನಂತರ ವಿವಿಧ ಕ್ಷೇತ್ರಗಳ ಪರಿಣಿತ ತಜ್ಞರುಗಳನ್ನೊಳಗೊಂಡ ಒಂದು "ವಿಷನ್ ಗ್ರೂಪ್" ರೂಪಿಸಲು ಸರ್ಕಾರ ನಿರ್ಧರಿಸಿತ್ತು. ನಿಮಾನ್ಸ್ ಸಂಸ್ಥೆ ನಿರ್ದೇಶಕ ಡಾ.ಜಿ. ಗುರುರಾಜ್ ಅವರನ್ನು ವಿಷನ್ ಗ್ರೂಪ್ನ ಅಧ್ಯಕ್ಷರಾಗಿ, ಡಾ. ಸತೀಶ್ ಅವರು ಸಂಯೋಜಕರಾಗಿದ್ದಾರೆ. ಅದೇ ರೀತಿ 38 ಮಂದಿ ವಿಷನ್ ಗ್ರೂಪ್ನ ಸದಸ್ಯರಾಗಿದ್ದಾರೆ.