ಬೆಂಗಳೂರು: ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಜನಸೇವಕ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಯಾಗಿದ್ದ ಈ ಜನಸ್ನೇಹಿ ಯೋಜನೆಗೆ ಕೊರೊನಾ ಬ್ರೇಕ್ ಹಾಕಿತ್ತು. ಆದರೆ, ಹಣಕಾಸು ಕೊರತೆಯ ಹಿನ್ನೆಲೆ ಸರ್ಕಾರ ಯೋಜನೆಯ ಶೀಘ್ರ ಪುನಾರಂಭಕ್ಕೆ ಒಲವು ತೋರುತ್ತಿಲ್ಲ.
ರಾಜಾಜಿನಗರ, ಮಹದೇವಪುರ, ಟಿ.ದಾಸರಹಳ್ಳಿ, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಜನಸೇವಕ ಯೋಜನೆಯನ್ನು ಅಧಿಕೃತವಾಗಿ ಸರ್ಕಾರ ಜಾರಿಗೆ ತಂದಿತ್ತು. ಬಳಿಕ ಕೋವಿಡ್ ಹಿನ್ನೆಲೆ ಜನಸೇವಕ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು.
ಕಂದಾಯ, ಪೊಲೀಸ್, ಕಾರ್ಮಿಕ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ, ಬಿಬಿಎಂಪಿ ಸೇರಿ ಒಟ್ಟು ಆರು ಇಲಾಖೆಗಳ 53 ವಿವಿಧ ಸೇವೆಗಳನ್ನು ಜನಸೇವಕ ಯೋಜನೆಯಡಿ ಪೂರೈಸಲಾಗುತ್ತಿದೆ. ಜಾತಿ ಪ್ರಮಾಣ ಪತ್ರ, ಪಿಂಚಣಿ, ಖಾತೆ ಬದಲಾವಣೆ, ಜಾತಿ ಪ್ರಮಾಣಪತ್ರ, ಹಿರಿಯ ನಾಗರಿಕರ ಕಾರ್ಡ್, ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್, ಆದಾಯ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ ಮುಂತಾದ ಸೇವೆಗಳನ್ನು ಜನಸೇವಕರ ಮೂಲಕ ನಿಗದಿತ ಅವಧಿಯಲ್ಲಿ ಮನೆ ಬಾಗಿಲಿಗೆ ಪೂರೈಸಲಾಗುತ್ತದೆ.
ನಾಗರಿಕರು ತಮ್ಮ ದಾಖಲೆಗಳ ಶುಲ್ಕದೊಂದಿಗೆ ಪ್ರತಿ ಜನಸೇವಕ ಸೇವೆಗೆ 115 ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕು. ಜನಸೇವಕರು ಮನೆ ಬಾಗಿಲಿಗೆ ಬಂದು ಸೇವೆಯನ್ನು ಪೂರೈಕೆ ಮಾಡುವ ವಿನೂತನ ಯೋಜನೆ ಇದಾಗಿದೆ.
ಯೋಜನೆ ಪುನಾರಂಭಿಸುವಲ್ಲಿ ಅಧಿಕಾರಿಗಳೇ ಸುಸ್ತು : ಜನಸೇವಕ ಯೋಜನೆಯನ್ನು ಪುನಾರಂಭಿಸುವ ನಿಟ್ಟಿನಲ್ಲಿ ಅಧಿಕಾರಿಗಳೇ ಸುಸ್ತಾಗಿದ್ದಾರೆ. ಲಾಕ್‌ಡೌನ್ ಮುಗಿದಾಗಿನಿಂದ ಯೋಜನೆ ಪುನಾರಂಭಕ್ಕೆ ಅಧಿಕಾರಿಗಳು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಈ ಸಂಬಂಧ ಎಲ್ಲಾ ಕೋವಿಡ್ ಸುರಕ್ಷತೆಯೊಂದಿಗೆ ಜನಸೇವಕರ ಹೊಸ ಕಾರ್ಯವೈಖರಿ ಬಗ್ಗೆ ಜಾಗೃತಿ ವಿಡಿಯೋವನ್ನೂ ಸಿದ್ಧಪಡಿಸಿದೆ. ಆದರೆ, ಸೇವೆ ಪುನಾರಂಭಕ್ಕೆ ಮಾತ್ರ ಸರ್ಕಾರ ಆಸಕ್ತಿ ತೋರುತ್ತಿಲ್ಲ.
ಇದೀಗ ಮತ್ತೆ ದೀಪಾವಳಿ ಹಬ್ಬದ ಬಳಿಕ ಯೋಜನೆ ಪುನಾರಂಭ ಮಾಡಲಿದ್ದೇವೆ. ಕೊರೊನಾ ಹೆಚ್ಚಿರುವುದರಿಂದ ಸೇವೆ ಸ್ಥಗಿತಗೊಳಿಸಲಾಗಿತ್ತು. ಈಗ ಕೋವಿಡ್ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆ ದೀಪಾವಳಿ ಹಬ್ಬದ ಬಳಿಕ, ಅಂದರೆ ಡಿಸೆಂಬರ್‌ನಲ್ಲಿ ಯೋಜನೆಯನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ಸಕಾಲ ಸಚಿವರಾಗಿರುವ ಸುರೇಶ್ ಕುಮಾರ್ ಅವರ ಬಳಿಯೂ ಈ ಬಗ್ಗೆ ಚರ್ಚಿಸಿ, ಯೋಜನೆ ಪುನಾರಂಭಕ್ಕೆ ಮನವಿ ಮಾಡಿದ್ದೇವೆ ಎಂದು ಜನಸೇವಕ ಯೋಜನೆಯ ನಿರ್ದೇಶಕ ವರಪ್ರಸಾದ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಜನಸೇವಕ ಯೋಜನೆ ಸ್ಥಿತಿಗತಿ : ಲಾಕ್ಡೌನ್ಗೂ ಮುನ್ನ ಜಾರಿಯಲ್ಲಿದ್ದ ಜನಸೇವಕ ಯೋಜನೆಗೆ ಅಲ್ಪಾವಧಿಯಲ್ಲೇ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ಅದರಂತೆ ರಾಜಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ಸೇವೆ ಕೋರಿ ಒಟ್ಟು 635 ಬುಕ್ಕಿಂಗ್ ಮಾಡಲಾಗಿತ್ತು. ಅದರಲ್ಲಿ ಒಟ್ಟು 1512 ಸೇವಾ ವ್ಯವಹಾರ ನಡೆಸಲಾಗಿದೆ.
ಮಹದೇವಪುರ ಕ್ಷೇತ್ರದಲ್ಲಿ ಜನಸೇವಕ ಯೋಜನೆಯಡಿ ಒಟ್ಟು 1044 ಸೇವೆ ಕೋರಿ ಬುಕ್ಕಿಂಗ್ ಮಾಡಲಾಗಿತ್ತು. 2734 ಸೇವಾ ವ್ಯವಹಾರ ನಡೆಸಲಾಗಿತ್ತು. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಒಟ್ಟು ಸರ್ವೀಸ್ ಬುಕ್ಕಿಂಗ್ 1151, ಒಟ್ಟು ಸೇವಾ ವ್ಯವಹಾರ 2920 ತಲುಪಿತ್ತು. ಟಿ.ದಾಸರಹಳ್ಳಿ ಕ್ಷೇತ್ರದಲ್ಲಿನ ಒಟ್ಟು ಸೇವಾ ಬುಕ್ಕಿಂಗ್ 7110 ಆಗಿದ್ದರೆ, ಒಟ್ಟು 23,061 ಸೇವಾ ವ್ಯವಹಾರ ನಡೆದಿದೆ.