ದೇವನಹಳ್ಳಿ: ವಿಮಾನದ ಶೌಚಾಲಯದ ವಾಶ್ ಬೇಸಿನ್ನಲ್ಲಿ ಅಡಗಿಸಿ ಇಟ್ಟು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಕರಣವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ. ಆಕ್ಟೋಬರ್ 7ರಂದು ಮಾಲ್ಡಿವ್ಸ್ನ ಮಾಲೆಯಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಅಕ್ರಮವಾಗಿ ಸಾಗಿಸಲು ಬಚ್ಚಿಡಲಾಗಿದ್ದ ಚಿನ್ನ ಪತ್ತೆ ಮಾಡಲಾಗಿದೆ. 3.2 ಕೆಜಿ ತೂಕದ 1.8 ಕೋಟಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ವಿಮಾನವನ್ನು ತಪಾಸಣೆ ನಡೆಸಿದಾಗ ವಿಮಾನದ ಶೌಚಾಲಯದ ವಾಶ್ ಬೆಸಿನ್ನಲ್ಲಿ ಅಡಗಿಸಿ ಇಟ್ಟಿದ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್‌ನಲ್ಲಿ ಚಿನ್ನದ ತುಂಡುಗಳು ಸಿಕ್ಕಿವೆ.
ಕಳ್ಳಸಾಗಣೆದಾರರು ಚಿನ್ನವನ್ನ ವಾಶ್ ಬೆಸಿನ್ನಲ್ಲಿ ಇಟ್ಟಿದ್ದಾರೆ. ವಿದೇಶದಿಂದ ಈ ವಿಮಾನದ ಮೂಲಕ ದೇಶೀಯ ಮಾರ್ಗದಲ್ಲಿ ಸಂಚಾರಿಸುತ್ತಾರೆ. ಇದೇ ವಿಮಾನದಲ್ಲಿ ಬೇರೊಂದು ಸ್ಥಳಕ್ಕೆ ಹೋಗುವ ಪ್ರಯಾಣಿಕ ಅಲ್ಲಿಂದ ಚಿನ್ನವನ್ನ ತೆಗೆದುಕೊಂಡ ಹೋಗುವ ಸಾಧ್ಯತೆ ಇತ್ತು. ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದವನ ಪತ್ತೆ ಮಾಡುವ ಕಾರ್ಯವನ್ನು ಕಸ್ಟಮ್ಸ್ ಅಧಿಕಾರಿಗಳು ಪ್ರಾರಂಭಿಸಿದ್ದಾರೆ.
ಏರ್ಪೋರ್ಟ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1,254 ಗ್ರಾಂ ಚಿನ್ನ ವಶ: ಮತ್ತೊಂದೆಡೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪತ್ಯೇಕ ಪ್ರಕರಣಗಳ ಅಡಿ ಅಕ್ರಮವಾಗಿ ಸಾಗಿಸುತ್ತಿದ್ದ 1,254 ಗ್ರಾಂ ಚಿನ್ನವನ್ನು ಇತ್ತೀಚೆಗೆ ವಶಕ್ಕೆ ಪಡೆಯಲಾಗಿತ್ತು. ಮೊದಲ ಪ್ರಕರಣದಲ್ಲಿ ಅಕ್ಟೋಬರ್ 9ರಂದು ಎರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX 816 ಮೂಲಕ ಅಬುಧಾಬಿಯಿಂದ ಮಂಗಳೂರಿಗೆ ಬರುತ್ತಿದ್ದ ಪ್ರಯಾಣಿಕನನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಡೆದು ನಿಲ್ಲಿಸಿ, ತಪಾಸಣೆ ನಡೆಸಿದ್ದರು.
ಆರೋಪಿಯ ಬಳಿ 1,053 ಗ್ರಾಂ ಚಿನ್ನದ ಪೇಸ್ಟ್ ಪತ್ತೆಯಾಗಿತ್ತು. ಇದರ ಮೌಲ್ಯ 61.6 ಲಕ್ಷ ರೂಪಾಯಿ. ಈತ ನಾಲ್ಕು ಅಂಡಾಕಾರದ ವಸ್ತುಗಳಲ್ಲಿ ಚಿನ್ನವನ್ನು ಇರಿಸಿ, ಗುದನಾಳದಲ್ಲಿ ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಣೆ ಮಾಡಿರುವುದು ಪತ್ತೆಯಾಗಿತ್ತು. ಎರಡನೇ ಪ್ರಕರಣದಲ್ಲಿ ಅಕ್ಟೋಬರ್ 9 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX384 ಮೂಲಕ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಪ್ರಯಾಣಿಕನ ಬ್ಯಾಗ್‌ನಲ್ಲಿ ಹೊದಿಕೆಯೊಳಗೆ ಇಟ್ಟುಕೊಂಡಿದ್ದ ಡಬಲ್ ಲೇಯರ್ಡ್ ಬಟ್ಟೆಯಲ್ಲಿ ಬಚ್ಚಿಡಲಾಗಿದ್ದ 201 ಗ್ರಾಂ ಚಿನ್ನದ ಪೇಸ್ಟ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಇದನ್ನೂ ಓದಿ: ಸುಧಾ ಮೂರ್ತಿ ಹೆಸರು ದುರ್ಬಳಕೆ ಪ್ರಕರಣ: ಬೆಂಗಳೂರು ಪೊಲೀಸರಿಂದ ಆರೋಪಿ ಬಂಧನ