ಬೆಂಗಳೂರು: ವೈಭವ್ ಜ್ಯುವೆಲ್ಲರ್ಸ್ನ ಚಿನ್ನಾಭರಣಗಳ ಮೇಳದಲ್ಲಿ ಕಳ್ಳರು ಕರಾಮತ್ತು ತೋರಿಸಿ 196 ಗ್ರಾಂ ತೂಕದ ಚಿನ್ನದ ಸರ ಎಗರಿಸಿರುವ ಘಟನೆ ಸುಬ್ರಮಣ್ಯನಗರ ವ್ಯಾಪ್ತಿಯ ಖಾಸಗಿ ಹೋಟೆಲ್ನಲ್ಲಿ ನಡೆದಿದೆ.
ನಗರದ ವೈಭವ್ ಜುವೆಲ್ಲರ್ಸ್ ಗ್ರಾಹಕರನ್ನು ಸೆಳೆಯಲು ವಿವಿಧ ವಿನ್ಯಾಸಗಳ ಹೊಸ ಬಗೆಯ ಚಿನ್ನಾಭರಣಗಳ ಮೇಳವನ್ನು ಇದೇ ಜನವರಿ 18 ರಂದು ಬೆಂಗಳೂರಿನ ಸುಬ್ರಮಣ್ಯನಗರ ವ್ಯಾಪ್ತಿಯ ಖಾಸಗಿ ಹೋಟೆಲ್ನಲ್ಲಿ ನಡೆಸಿತ್ತು. ಆ ಚಿನ್ನಾಭರಣಗಳ ಮೇಳದಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿ ಎಂಟ್ರಿ ಕೊಟ್ಟಿದ್ದ ಐನಾತಿ ಕಳ್ಳರ ಹೈಟೆಕ್ ಗ್ಯಾಂಗೊಂದು ಜ್ಯುವೆಲ್ಲರ್ಸ್ ಸಿಬ್ಬಂದಿ, ಗ್ರಾಹಕರಿಗೆ ಗೊತ್ತಾಗದ ರೀತಿ ಚಿನ್ನಾಭರಣವನ್ನು ಎಗರಿಸಿ ಪರಾರಿಯಾಗಿದ್ದಾರೆ.
ಗ್ರಾಹಕರ ಸೋಗಿನಲ್ಲಿ ಬಂದ ಗ್ಯಾಂಗ್ ದುಬಾರಿ ಬೆಲೆಯ ಡಿಸೈನ್ಗಳನ್ನು ಪರಿಶೀಲಿಸಿದವರಂತೆ ನಟನೆ ಮಾಡಿ, ತಮ್ಮನ್ನ ಯಾರೂ ಗಮನಿಸ್ತಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಆಭರಣವನ್ನು ತನ್ನ ಗ್ಯಾಂಗ್ನ ಲೇಡಿ ಕೈಗೆ ಕೊಟ್ಟಿದೆ. ಆಕೆ ಅದನ್ನು ತನ್ನ ಉಡುಪಿನಲ್ಲಿರಿಸಿಕೊಂಡು ತಕ್ಷಣ ಟೀಂ ಅಲ್ಲಿಂದ ಎಸ್ಕೇಪ್ ಆಗಿದೆ.
ಇನ್ನು ವೈಭವ್ ಜುವೆಲ್ಲರ್ಸ್ ಚಿನ್ನಾಭರಣ ಮೇಳದ ಬಳಿಕ ಅಲ್ಲಿಡಲಾಗಿದ್ದ ಚಿನ್ನಾಭರಣಗಳನ್ನು ಟ್ಯಾಲಿ ಮಾಡಿದಾಗ 196 ಗ್ರಾಂನ ಚಿನ್ನಾಭರಣ ಮಿಸ್ ಆಗಿತ್ತು. ಆಗ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಕಳ್ಳತನ ಸಂಬಂಧ ಸುಬ್ರಮಣ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಾಕಿ ಚೋರರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.