ಬೆಂಗಳೂರು: ಕೇರಳದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಆರೋಪಿಯಾಗಿದ್ದ ಸ್ವಪ್ನಾ ಸುರೇಶ್ಗೆ ಬೆದರಿಕೆ ಹಾಕಿದ ಆರೋಪದಡಿ, ಆರೋಪಿ ವಿಜೇಶ್ ಪಿಳ್ಳೈನನ್ನು ವಿಚಾರಣೆಗಾಗಿ ಕೆ.ಆರ್.ಪುರ ಪೊಲೀಸರು ಕರೆಸಿದ್ದು, ಇದೀಗ ವಿಜೇಶ್ ಪಿಳ್ಳೈ ವಿಚಾರಣೆಗೆ ಹಾಜರಾಗಿದ್ದಾರೆ.
ಸ್ವಪ್ನಾ ಸುರೇಶ್ ದೂರಿನನ್ವಯ ಬೆಂಗಳೂರಿನಲ್ಲಿ ದಾಖಲಾದ ಎಫ್ಐಆರ್ನಲ್ಲಿ, ವಿಜೇಶ್ ಪಿಳ್ಳೈ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಯಾವುದೇ ಹೇಳಿಕೆ ನೀಡದಿರಲು 30 ಕೋಟಿ ಆಮಿಷವೊಡ್ಡುವುದರ ಜೊತೆಗೆ ಜೀವ ಬೆದರಿಕೆ ಹಾಕಿದ್ದರು ಎಂದು ದೂರಿದ್ದರು. ಇತ್ತೀಚೆಗೆ ತಮ್ಮ ಫೇಸ್‌ಬುಕ್ ಲೈವ್ನಲ್ಲಿ ಕೂಡ ಸ್ವಪ್ನಾ ಸುರೇಶ್ ವಿಜೇಶ್ ಪಿಳ್ಳೈ ವಿರುದ್ಧ ಆಮಿಷವೊಡ್ಡಿರುವ ಮತ್ತು ಜೀವ ಬೆದರಿಕೆ ಹಾಕಿರುವ ಬಗ್ಗೆ ಆರೋಪಿಸಿದ್ದರು.
ದೂರಿನಲ್ಲಿ ಇರುವುದೇನು?: ಸ್ವಪ್ನಾ ಸುರೇಶ್ ಬೆಂಗಳೂರಿನಲ್ಲಿ ನೀಡಿರುವ ದೂರಿನಲ್ಲಿ 'ಮಾರ್ಚ್ 4ರಂದು ಬೆಂಗಳೂರಿನ ವೈಟ್ ಫೀಲ್ಡ್ ಮುಖ್ಯರಸ್ತೆಯಲ್ಲಿರುವ ಹೋಟೆಲ್ವೊಂದರಲ್ಲಿ ತನ್ನನ್ನು ಭೇಟಿಯಾಗಿದ್ದ ವಿಜೇಶ್ ಪಿಳ್ಳೈ, ತನ್ನನ್ನ ಸಿಪಿಐಎಂ ಕಾರ್ಯದರ್ಶಿ ಗೋವಿಂದನ್ ಕಳಿಸಿರುವುದಾಗಿ ಮಾತು ಆರಂಭಿಸಿದ್ದರು. ಬಳಿಕ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಯಾವುದೇ ಹೇಳಿಕೆ ನೀಡಬಾರದು. ಇದಕ್ಕೆ ಪ್ರತಿಯಾಗಿ 30 ಕೋಟಿ ಕೊಡಲಿದ್ದು, ಅದನ್ನು ಪಡೆದು ಒಂದು ವಾರದೊಳಗೆ ದೇಶ ಬಿಟ್ಟು ತೆರಳಬೇಕು ಇಲ್ಲವಾದರೆ ನಿನ್ನ ಬ್ಯಾಗಿನಲ್ಲಿ ಬಾಂಬ್ ಇಟ್ಟು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು' ಎಂದು ಉಲ್ಲೇಖಿಸಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ ಮೇರೆಗೆ ವಿಜೇಶ್ ಪಿಳ್ಳೈ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ಪುರಂ ಪೊಲೀಸರು, ಸದ್ಯ ಘಟನೆ ನಡೆದಿದೆ ಎನ್ನಲಾದ ಹೋಟೆಲಿಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದರು. ಸ್ವಪ್ನಾ ಸುರೇಶ್ ಅವರ ಹೇಳಿಕೆಯನ್ನ ವೀಡಿಯೋ ಚಿತ್ರೀಕರಣ ಸಹ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ವಿಜೇಶ್ ಪಿಳ್ಳೈಗೆ ನೋಟಿಸ್ ನೀಡಲಾಗಿತ್ತು. ಈ ನೋಟಿಸ್ನ ಹಿನ್ನೆಲ್ಲೆ ಪಿಳ್ಳೈ ಇಂದು ವಿಚಾರಣೆ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ನನ್ನನ್ನು ಹೋಟೆಲ್ಗೆ ಆಹ್ವಾನಿಸಿದ್ದರು: ಸಿಪಿಐಎಂ ನಾಯಕರ ವಿರುದ್ಧ ಸ್ವಪ್ನಾ ಸುರೇಶ್ ಲೈಂಗಿಕ ದೌರ್ಜನ್ಯ ಆರೋಪ