ಬೆಂಗಳೂರು : ಚಿನ್ನದಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ಖತರ್ನಾಕ್ ಖದೀಮ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ. ಈ ಘಟನೆ ಜಯನಗರ 4ನೇ ಬ್ಲಾಕ್ನ ವರ್ಧಮಾನ್ ಜ್ಯುವೆಲ್ಲರಿ ಶಾಪ್ನಲ್ಲಿ ನಡೆದಿದೆ.
ಜ್ಯುವೆಲ್ಲರಿ ಶಾಪ್ಗೆ ಬಂದ ಖದೀಮ ಸರ ತೋರಿಸುವಂತೆ ಮಾಲೀಕನಿಗೆ ಹೇಳಿದ್ದಾನೆ. ಅಂಗಡಿ ಮಾಲೀಕ 96 ಸಾವಿರ ರೂಪಾಯಿ ಮೌಲ್ಯದ 19 ಗ್ರಾಂ. ತೂಕದ ಸರ ತೋರಿಸಿದ್ದಾರೆ. ಈ ವೇಳೆ ಸರ ಇದ್ದ ಬಾಕ್ಸ್ ಪಡೆದುಕೊಂಡ ಖದೀಮ, ಅದರಲ್ಲಿದ್ದ ಸರವನ್ನು ಮೆಲ್ಲನೆ ಜೀಬಿಗಿಳಿಸಿದ. ಬಳಿಕ ಮಾಲೀಕನ ಗಮನ ಬೇರೆಡೆಗೆ ಸೆಳೆದು ಬಾಕ್ಸ್ ವಾಪಸ್ ಕೊಟ್ಟಿದ್ದಾನೆ. ಬಳಿಕ ಹಣ ಕಡಿಮೆಯಿದೆ ಎಟಿಎಂಗೆ ಹೋಗಿ ಬರುವುದಾಗಿ ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಇದನ್ನೂ ಓದಿ: ಗೋಮಾಂಸ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರ ದಾಳಿ: 50 ಕೆ.ಜಿ ಮಾಂಸ ವಶಕ್ಕೆ
ಕೆಲ ಸಮಯದ ಬಳಿಕ ಅನುಮಾನ ಬಂದು ಅಂಗಡಿ ಮಾಲೀಕ ಬಾಕ್ಸ್ ತೆರೆದು ನೋಡಿದಾಗ ಸರ ಇಲ್ಲದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಖದೀಮನ ಕೈಚಳಕ ಗೊತ್ತಾಗಿದೆ.
ಅಂಗಡಿ ಮಾಲೀಕ ಜಯನಗರ ನಿವಾಸಿ ರೋಹಿತ್ ಜೈನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.