ಬೆಂಗಳೂರು: ರಾಜ್ಯದಲ್ಲಿ 1ರಿಂದ 8ನೇ ತರಗತಿ ವರೆಗಿನ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಗಳಿಗೆ ಎರಡು ಜೊತೆ ಸಿದ್ಧಪಡಿಸಿದ ಸಮವಸ್ತ್ರ ಗಳನ್ನ ಎರಡು ತಿಂಗಳ ಒಳಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಕೇವಲ ಒಂದು ಜೊತೆ ಮಾತ್ರ ಸಮವಸ್ತ್ರ ವನ್ನ ನೀಡಲಾಗಿರುವ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ ಈ ಆದೇಶ ನೀಡಲಾಗಿದೆ.
ಒಂದೇ ಜೊತೆ ಬಟ್ಟೆಯನ್ನ ವಿದ್ಯಾರ್ಥಿಗಳು ಒಂದು ವಾರ ಧರಿಸಿ ಶುಚಿತ್ವ ಹೇಗೆ ಕಾಪಾಡಬೇಕೆಂದು ನ್ಯಾಯಾಲಯ ಸರ್ಕಾರವನ್ನ ಪ್ರಶ್ನಿಸಿದ್ದು, ಎರಡು ತಿಂಗಳ ಕಾಲಾವಧಿಯೊಳಗೆ ಎರಡು ಜೊತೆ ಸಮವಸ್ತ್ರ ವನ್ನ ನೀಡಬೇಕೆಂದು ತಾಕೀತು ಮಾಡಿದೆ.
ಕೊಪ್ಪಳದ ವಿದ್ಯಾರ್ಥಿ ಮಂಜುನಾಥ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಸರ್ಕಾರ ತಮಗೆ ಒಂದೇ ಜೊತೆ ಸಮವಸ್ತ್ರ ಕಲ್ಪಿಸಿದೆ. ಎರಡು ಜೊತೆ ಸಮವಸ್ತ್ರ ನೀಡಲಿ ಎಂದು ಕೋರಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಾಲಕ್ಕೆ ಉತ್ತರಿಸಿ ಕೇಂದ್ರ ಸರ್ಕಾರವು ಹಣ ಬಿಡುಗಡೆ ಮಾಡಲು ವಿಳಂಬ ಮಾಡಿದ್ದರಿಂದ ಒಂದು ಜೊತೆ ಸಮವಸ್ತ್ರ ಮಾತ್ರ ಒದಗಿಸಿದೆ ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ ವಿಧ್ಯಾರ್ಥಿಗಳ ಉಚಿತ ಶಿಕ್ಷಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ,ವಿದ್ಯಾರ್ಥಿಗಳು 1 ಜೊತೆ ಸಮವಸ್ತ್ರವನ್ನು ವಾರವಿಡೀ ತೊಟ್ಟರೆ ಹೇಗೆ..? ಅವರು ಶುಚಿತ್ವ ಕಾಪಾಡಿಕೊಳ್ಳೋದು ಹೇಗೆ ಎಂದು ಸರ್ಕಾರವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ತರಾಟೆಗೆ ತೆಗೆದುಕೊಂಡರು.
ಎರಡು ಜೊತೆ ಹೊಲಿದ ಸಮವಸ್ತ್ರ, ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್ ಗಳನ್ನ ಎಲ್ಲಾ ಸರ್ಕಾರಿ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಒದಗಿಸಬೇಕು. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಕೊಪ್ಪಳದ ವಿದ್ಯಾರ್ಥಿ ಮಂಜುನಾಥ್‌ಗೆ 2 ವಾರದಲ್ಲಿ ಎರಡು ಜೊತೆ ಸಮವಸ್ತ್ರ ಒದಗಿಸುವಂತೆ ಆದೇಶ ನೀಡಿ ವಿಚಾರಣೆಯನ್ನ ಮುಂದೂಡಿಕೆ ಮಾಡಿದೆ.