ಬೆಂಗಳೂರು: ಅಭಿವೃದ್ಧಿ ಕಾರ್ಯಗಳಿಗೆ ಜಮೀನು ವಶಪಡಿಸಿಕೊಳ್ಳವಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕ ಕಾಯಿದೆಯ ಅನ್ವಯ ಅಗತ್ಯ ನಿಯಮಗಳನ್ನು ಪಾಲಿಸಿ ಭೂಮಿಯನ್ನು ಸ್ವಾಧೀನಪಡಿಸಿಗೊಳ್ಳುವ ಪ್ರಕ್ರಿಯೆ ನಡೆಸಬೇಕು. ಅಲ್ಲದೇ ಸಂವಿಧಾನದ ಪ್ರಕಾರ ಆಸ್ತಿಯ ಹಕ್ಕು ವ್ಯಕ್ತಿಗಳಿಗಿದೆಯೇ ಹೊರತು ಗುಂಪುಗಳಿಗೆ ಅಲ್ಲ. ಹೀಗಾಗಿ ಪರಿಹಾರ ನೀಡದೇ ಏಕಾಏಕಿ ಭೂಮಿ ವಶಕ್ಕೆ ಪಡೆಯುವಂತಿಲ್ಲ ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಶಿವಮೊಗ್ಗದ ಕೆ.ವಿ.ಶ್ರೀನಿವಾಸರಾವ್, ಮತ್ತಿತರರು ತಮ್ಮ ಜಮೀನನ್ನು ರಸ್ತೆ ನಿರ್ಮಾಣಕ್ಕಾಗಿ ಅಧಿಕಾರಿಗಳು ಬಲವಂತವಾಗಿ ಸ್ವಾಧೀನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಜೊತೆಗೆ ಅಧಿಕಾರಿಗಳು ನಿಯಮದಂತೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸುವವರೆಗೆ ಅರ್ಜಿದಾರರಿಗೆ ಸೇರಿದ ಸ್ವತ್ತುಗಳನ್ನು ಹಸ್ತಕ್ಷೇಪ ಮಾಡುವುದಕ್ಕೆ ಸಕ್ಷಮ ಪ್ರಾಧಿಕಾರಕ್ಕೆ ನಿರ್ಬಂಧ ವಿಧಿಸಿತು.
ಸಾಂವಿಧಾನಿಕವಾಗಿ ಸಾರ್ವಜನಿಕರು ಆಸ್ತಿಯನ್ನು ಹೊಂದುವ ಹಕ್ಕು ಹೊಂದಿದ್ದಾರೆ. ಆದರೆ ಆ ಹಕ್ಕು ಗುಂಪಿಗಳಿಗೆ ಅಲ್ಲ. ಹಾಗಾಗಿ ಬೇರೆ ಭೂಮಾಲೀಕರು ಭೂಮಿ ನೀಡಲು ಒಪ್ಪಿದ್ದಾರೆ ಎಂದ ಮಾತ್ರಕ್ಕೆ ಇತರರ ಸಹಮತಿ ಇದೆ ಎಂದಾಗುವುದಿಲ್ಲ. ಹೀಗಾಗಿ ನಿಯಮಗಳ ಪ್ರಕಾರವೇ ಜಮೀನನ್ನು ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆ ನಡೆಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, "ಆಸ್ತಿ ಹಕ್ಕು ಮೂಲಭೂತ ಹಕ್ಕು ಅಲ್ಲದಿದ್ದರೂ ಸಹ ಸಂವಿಧಾನದ ಕಲಂ 300ಎ ಅಡಿ ಅದನ್ನು ಖಾತ್ರಿಪಡಿಸಲಾಗಿದೆ ಮತ್ತು ತಮ್ಮ ಕಕ್ಷಿದಾರರು ಭೂ ಮಾಲೀಕರಾಗಿದ್ದಾರೆ. ಸರ್ಕಾರಿ ಅಧಿಕಾರಿಗಳು ನಿಯಮ ಪಾಲನೆ ಮಾಡದೆ ಅವರಿಗೆ ಭೂಮಿಯನ್ನು ಬಿಟ್ಟುಕೊಡುವಂತೆ ಒತ್ತಾಯಿಸುತ್ತಿದ್ದು, ಇದು ಸರಿಯಾದ ನಿಯಮವಲ್ಲ. ಒಂದು ವೇಳೆ ಸರ್ಕಾರ 2013ರ ಭೂ ಸ್ವಾಧೀನ ಕಾಯ್ದೆಯಡಿ ಭೂಮಿಯನ್ನು ನಿಯಮಬದ್ಧವಾಗಿ ಸ್ವಾಧೀನಪಡಿಸಿಕೊಳ್ಳುವುದಾದರೆ ಅರ್ಜಿದಾರರ ಅಭ್ಯಂತರ ಇಲ್ಲ" ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ್ದ ಸರ್ಕಾರದ ಪರ ವಕೀಲರು, "ಕೆಲವು ಭೂ ಮಾಲೀಕರು ಸರ್ಕಾರ ವಿಧಿಸಿರುವ ಷರತ್ತುಗಳನ್ನು ಒಪ್ಪಿ ಭೂಮಿ ಬಿಟ್ಟುಕೊಟ್ಟಿದ್ದಾರೆ. ಸರ್ಕಾರ ಸ್ವಾಧೀನ ಪಡಿಸಿಕೊಂಡ ಜಮೀನಿನಲ್ಲಿ ಅರ್ಜಿದಾರರು ಓಡಾಡಲು ಮುಕ್ತರಾಗಿರುತ್ತಾರೆ. ಆದ್ದರಿಂದ 2013ರ ಭೂ ಸ್ವಾಧೀನ ಕಾಯಿದೆಯ ಪ್ರಕಾರ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಅಧಿಕ ಪರಿಹಾರ ನೀಡಲಾಗುವುದು" ಎಂದು ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿಗಳನ್ನು ಮಾನ್ಯ ಮಾಡಿ ನಿಯಮದ ಪ್ರಕಾರ ಭೂ ಸ್ವಾಧೀನ ಪ್ರಕ್ರಿಯೆ ನಡೆಸುವಂತೆ ಆದೇಶಿಸಿತು.
ಇದನ್ನೂ ಓದಿ: ಆಂಬ್ಯುಲೆನ್ಸ್ ಅಪಘಾತದಿಂದ ರೋಗಿ ಸಾವು ಪ್ರಕರಣ: ಪರಿಹಾರ ನೀಡಲು ಹೈಕೋರ್ಟ್ ಆದೇಶ