ಬೆಂಗಳೂರು: ಹುಟ್ಟು-ಸಾವಿನ ನಡುವಿನ ಪಯಣವೇ ಜೀವನ. ಜೀವ ಇರುವಷ್ಟು ದಿನ ಮಾತ್ರ ಶರೀರಕ್ಕೆ ಬೆಲೆ. ಒಂದೊಮ್ಮೆ ಆತ್ಮ ಕಾಯವನ್ನು ತ್ಯಜಿಸಿದರೆ ಅದು ಬರೀಯ ಮೃತದೇಹವಷ್ಟೇ. ಆದರೆ ಸಾವಿಗೂ ಹುಟ್ಟಿನಷ್ಟೇ ಮಹತ್ವವಿದೆ. ಹುಟ್ಟಿದ ಮಗುವನ್ನು ಭೂಮಿಗೆ ಸ್ವಾಗತಿಸುವಂತೆಯೇ ತೀರಿಹೋದ ಮಾನವನಿಗೆ ಸಂಸ್ಕಾರ ಮಾಡುವುದು ಭೂಮಿಯ ಮೇಲಿರುವ ಪ್ರತಿ ಧರ್ಮದ ಪದ್ಧತಿ. ಕೊರೊನಾ ಮಾರಕ ರೋಗವೀಗ ಅದೆಷ್ಟೋ ಜನರಿಗೆ ಮರಣೋತ್ತರ ಕಾರ್ಯಗಳನ್ನು ಮಾಡುವಲ್ಲಿಯೂ ತೊಡಕಾಗುತ್ತಿದೆ. ಕೊನೆಯ ಬಾರಿ ತಮ್ಮವರ ಮುಖ ನೋಡಲೂ ಆಗದೆ, ಅವರಿಗೆ ಸಲ್ಲಬೇಕಿರುವ ಅಂತಿಮ ವಿಧಿ ವಿಧಾನಗಳನ್ನೂ ಸಲ್ಲಿಸಲಾಗದೆ ಅನೇಕರ ಮನಸ್ಸಿನ ವೇದನೆ ಹೇಳತೀರದು. ಇಂಥ ಸಂದರ್ಭದಲ್ಲಿ ಕೆಲವೇ ಕೆಲವು ಜನರ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರೇ ನೆರವೇರಿಸುತ್ತಿದ್ದಾರೆ. ಇನ್ನುಳಿದ ಹಲವರ ಜೀವನದ ಕೊನೆಯ ಯಾತ್ರೆಗೆ ಕೆಲವು ಬಂಧು-ಬಳಗ, ರಕ್ತಸಂಬಂಧವಲ್ಲದ ಹೃದಯವಂತರು ಶವಪೆಟ್ಟಿಗೆಗೆ ಹೆಗಲು ಕೊಡುತ್ತಿದ್ದಾರೆ. ಅಂತಹ ಹೃದಯ ಸಿರಿವಂತರ ಸಾಲಿಗೆ ಸಿಲಿಕಾನ್ ಸಿಟಿಯ ಇಬ್ಬರು ಯುವತಿಯರು ಸೇರಿದ್ದಾರೆ.
ಕೋವಿಡ್ನಿಂದ ಸಾವನ್ನಪ್ಪಿದ ರೋಗಿಗಳ ಶವಸಂಸ್ಕಾರ ಮಾಡಲು ಬೆಂಗಳೂರಿನ ಇಬ್ಬರು ಹುಡುಗಿಯರು ಸ್ವಯಂಸೇವಕರ ಗುಂಪಿಗೆ ಸೇರಿದ್ದು, ಇವರ ಸಮಾಜಸೇವೆಗೆ ತಮ್ಮ ಕುಟುಂಬವೇ ಸ್ಫೂರ್ತಿಯಾಗಿದೆ.
"ನನ್ನ ತಂದೆಯೂ ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರಿಂದಲೇ ನಾನು ಸ್ಫೂರ್ತಿ ಪಡೆದೆ. ಇಲ್ಲಿ ಅನೇಕರು ನಮ್ಮೊಂದಿಗೆ ಅಂತ್ಯಸಂಸ್ಕಾರ ನಡೆಸುವ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಮನಸ್ಸಿಗೆ ಒಂದು ರೀತಿಯ ವಿಶೇಷ ನೆಮ್ಮದಿ ಸಿಗುತ್ತಿದೆ. ನಾವು ಒಟ್ಟು 15 ಜನರ ತಂಡ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಕೈಲಾದಷ್ಟು ಜನರ ಸಹಾಯ ಮಾಡುವ ಉದ್ದೇಶ ನಮ್ಮದು. ನಾವು ಮಾಡುವ ಕೆಲಸದಲ್ಲಿ ನಿರಾಳ ಭಾವವಿದೆ. ವ್ಯಕ್ತಿಯ ಸ್ವಂತ ಕುಟುಂಬಸ್ಥರೇ ಅಂತ್ಯಕ್ರಿಯೆಗೆ ಬರುವುದಿಲ್ಲ. ಇಂತಹ ವಿಚಾರಗಳನ್ನು ಕೇಳಿದಾಗ ನಾವು ಏನಾದರೂ ಮಾಡಲೇಬೇಕು ಎನಿಸಿತು. ಅದಕ್ಕೆ ನಾವು ಈ ತಂಡದೊಂದಿಗೆ ಸೇರಿ ಶವಸಂಸ್ಕಾರ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆ" ಎಂದು ತಂಡದ ಸದಸ್ಯೆ ನಿಕೋಲ್ ಚೆರಿಯನ್ ಹೇಳಿದರು.
"ನನ್ನ ತಂದೆಯೂ ಇದೇ ತಂಡದ ಸದಸ್ಯರಾಗಿದ್ದರು. ಅವರಿಂದಲೇ ನನಗೂ ಈ ಕೆಲಸ ಮಾಡಲು ಪ್ರೇರಣೆ ದೊರೆಯಿತು. ಜನರು ಸುಮ್ಮನೆ ಮನೆಯಿಂದ ಹೊರಬರಬಾರದು. ನಿಮ್ಮ ಮನೆಯವರನ್ನು, ಪ್ರೀತಿ ಪಾತ್ರರನ್ನು ಚೆನ್ನಾಗಿ ನೋಡಿಕೊಳ್ಳಿ. ಈ ಸಮಯದಲ್ಲಿ ಹೊರಗೆ ಓಡಾಡುವುದು ಒಳ್ಳೆಯದಲ್ಲ. ನಿಮ್ಮ ನೆರೆಹೊರೆಯವರಿಗೆ ಅವಶ್ಯಕವಿದ್ದಾಗ ಕೈಲಾದ ಸಹಾಯ ಮಾಡಿ. ಮನೆಯಲ್ಲಿರುವವರು ಸಹ ಕೊರೊನಾಗೆ ತುತ್ತಾಗುತ್ತಿದ್ದಾರೆ. ಇಲ್ಲಿ ಸ್ವಲ್ಪ ರಿಸ್ಕ್ ಜಾಸ್ತಿಯೇ ಇದೆ. ಹಾಗಂತ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ನಾವು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಿದ್ದೇವೆ" ಎಂದು ಅಂತ್ಯಸಂಸ್ಕಾರ ನಡೆಸುವ ನಿಕೋಲ್ ಚೆರಿಯನ್ ಹೇಳುತ್ತಾರೆ.
"ನಾನು ಈಗ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದೇನೆ. ಸದ್ಯ ಆನ್ಲೈನ್ ತರಗತಿಗಳು ನಡೆಯುತ್ತಿವೆ. ನನ್ನ ಕುಟುಂಬ ಬೆಂಗಳೂರಿನಲ್ಲಿಯೇ ವಾಸಿಸುತ್ತಿದೆ. ಮನೆಯ ಹಲವು ಸದಸ್ಯರು ಈಗಾಗಲೇ ಕೊರೊನಾ ರೋಗಿಗಳಿಗೆ ಸಹಾಯ ಮಾಡುವಲ್ಲಿ ನಿರತರಾಗಿದ್ದಾರೆ. ನಿಕೋಲ್ ಅವರ ತಂದೆ ಈ ತಂಡ ಸೇರಿದಾಗ ನಮಗೂ ಈ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎನಿಸಿತು. ಭಯ ಎಲ್ಲರಿಗೂ ಇದೆ. ಆದರೆ ನಾವು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದ್ದೇವೆ. ಹೆದರಿ ಕೂರುವ ಅಗತ್ಯವಿಲ್ಲ. ಏಕೆಂದರೆ ಈ ಜನರಿಗೆ ನಮ್ಮ ಸಹಾಯದ ಅಗತ್ಯವಿದೆ" ಅನ್ನೋದು ತಂಡದ ಮತ್ತೋರ್ವ ಸದಸ್ಯೆ ಟೀನಾ ಮಾತು.
"ನಾವೆಲ್ಲರೂ ಪಿಪಿಇ ಸೂಟ್ ಹಾಕುತ್ತೇವೆ. ಡಬಲ್ ಗ್ಲೌಸ್, ಡಬಲ್ ಮಾಸ್ಕ್, ಗಾಗಲ್ ಧರಿಸುತ್ತೇವೆ. ಆಗಾಗ್ಗೆ ಸ್ಯಾನಿಟೈಸರ್ ಬಳಸುತ್ತೇವೆ. ನನ್ನ ಕುಟುಂಬದ ಕಡೆಯಿಂದ ನನಗೆ ಸಂಪೂರ್ಣ ಬೆಂಬಲವಿದೆ. ನನ್ನ ಅಪ್ಪ-ಅಮ್ಮ ಸಹ ತುಂಬಾ ಜನರಿಗೆ ಸಹಾಯ ಮಾಡಿದ್ದಾರೆ. ಅವರೇ ನನಗೆ ಸ್ಫೂರ್ತಿ" ಎಂದು ಟೀನಾ ನಿರಾಳರಾದರು.
"ಕೊರೊನಾ ಶುರುವಾದಾಗಿನಿಂದಲೂ ನಾವು ಅಂತ್ಯಕ್ರಿಯೆ ಕಾರ್ಯದಲ್ಲಿ ತೊಡಗಿದ್ದೇವೆ. ಸುಮಾರು 20 ಜನರು ಈ ಒಂದೇ ಸ್ಮಶಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ಬಿಟ್ಟು ಬೇರೆ ಬೇರೆ ಸ್ಥಳಗಳಲ್ಲಿಯೂ ನಮ್ಮ ಸದಸ್ಯರು ಶವಸಂಸ್ಕಾರ ನಡೆಸುತ್ತಾರೆ. 18 ವರ್ಷದ ನನ್ನ ಮಗ ಸಹ ನಮ್ಮ ತಂಡದಲ್ಲಿದ್ದಾನೆ. ಇದೀಗ ಕಳೆದ ವಾರ ಈ ಯುವತಿಯರು ನಮ್ಮ ತಂಡ ಸೇರಿದ್ದಾರೆ. ಸಂತೋಷವಾಗುತ್ತದೆ" ಎಂದು ತಂಡದ ಪ್ರಮುಖ ಸದಸ್ಯ ಜೆ.ಸಗಾಯಾರಾಜ್ ತಿಳಿಸಿದರು.