ಬೆಂಗಳೂರು : ಕಸ ವಿಲೇವಾರಿ ಸಮಸ್ಯೆ ಬೆಂಗಳೂರಿಗೆ ಬಹಳ ದೊಡ್ಡ ಸವಾಲಾಗಿದ್ದು, ಹೊಸ ತಂತ್ರಜ್ಞಾನ ಬಳಸಿಕೊಂಡು ವಾರ್ಡ್ವಾರು ತ್ಯಾಜ್ಯ ಸಂಸ್ಕರಣಾ ಘಟಕ ತೆರೆದು ಮಹಾನಗರದ ತ್ಯಾಜ್ಯ ಸಮಸ್ಯೆ ಪರಿಹಾರಕ್ಕೆ ನಾವು ಬದ್ದವಾಗಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್ ಪ್ರಶ್ನೆಗೆ ಉತ್ತರಿಸಿದ ಸಿಎಂ, ಕಸ ಎಂದರೆ ತಾತ್ಸಾರ ಭಾವನೆಯಿಂದ ನೋಡಲಾಗುತ್ತಿದೆ. ಆದರೆ, ತ್ಯಾಜ್ಯ ವ್ಯರ್ಥವಲ್ಲ. ಹಸಿಕಸ, ಒಣ ಕಸ ನಿರ್ವಹಣೆ ಬಹಳ ಸವಾಲಾಗಿದೆ. ಇದಕ್ಕೆ ಸರಿಯಾದ ಯೋಜನೆ ಇಲ್ಲ. ಡಂಪಿಂಗ್ ಯಾರ್ಡ್ಗೆ ಹಾಕುವುದು. ಸಂಸ್ಕರಣ ಮಾಡಲಿದ್ದೇವೆ ಎನ್ನುವುದು, ವಿದ್ಯುತ್ ತಯಾರಿ ಮಾಡುತ್ತೇವೆ ಎಂದು ಹೇಳಿದ್ದರು.
ಆದರೆ, ಒಂದು ಯೂನಿಟ್ ಉತ್ಪಾದನೆ ಆಗಿಲ್ಲ. ಕಸ ನಿರ್ವಹಣೆ ಕಠಿಣ ಸವಾಲಾಗಿದೆ. ಬೆಂಗಳೂರು ತಲಾವಾರು ಲೆಕ್ಕದಲ್ಲಿ ಅತಿ ಹೆಚ್ಚು ತ್ಯಾಜ್ಯ ಉತ್ಪತ್ತಿ ಮಾಡುವ ನಗರವಾಗಿದೆ. ಹಾಗಾಗಿ ಪಾಲಿಕೆ ಹೊರತಾಗಿ ನಿರ್ಧಾರ ಕೈಗೊಳ್ಳಲು ಪ್ರತ್ಯೇಕ ಕಂಪನಿ ತೆರೆಯಲಾಗಿದೆ ಎಂದರು.
100 ಕೆಜಿಯಿಂದ 2-3 ಟನ್ ತ್ಯಾಜ್ಯ ಸಂಸ್ಕರಣೆಗೆ ಘಟಕ ಬಂದಿವೆ. ನಾನು ನನ್ನ ಮನೆಯಲ್ಲಿಯೇ ಕಸ ಸಂಸ್ಕರಣೆ ಪರಿಶೀಲಿಸಲು ಯಂತ್ರ ಹಾಕಿದ್ದೇನೆ. ಮಾಲ್, ದೊಡ್ಡ ಹೋಟೆಲ್ ನಲ್ಲಿ ಜನರೇಟರ್ ಜೊತೆ ಇಂತಹ ಘಟಕ ಮಾಡಬೇಕು. ಹಾಗಾದಲ್ಲಿ ಮಾತ್ರ ಕಸ ಸಂಸ್ಕರಣೆಯಿಂದ ಹಣವೂ ಬರಲಿದೆ ಎಂದರು.
ಪ್ರತಿನಿತ್ಯ 5 ಸಾವಿರ ಮೆಟ್ರಿಕ್ ಟನ್ ಕಸ ಉತ್ಪತ್ತಿ : ಬೆಂಗಳೂರಿನಲ್ಲಿ ಪ್ರತಿನಿತ್ಯ 5 ಸಾವಿರ ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗಲಿದೆ. ಇರುವ ವ್ಯವಸ್ಥೆಯಂತೆ ನಾವು ಸಂಸ್ಕರಿಸಿದರೆ ವಾಸನೆ ಬರಲಿದೆ. ಹಾಗಾಗಿ ಹೊಸ ತಂತ್ರಜ್ಞಾನ ಬಳಸಿ ವಾಸನೆ ಬಾರದಂತೆ ಸಂಸ್ಕರಣೆ ಮಾಡುವ ಪ್ರಯೋಗ ನಡೆದಿದೆ. ಕಸ ಸಂಸ್ಕರಣ ಮಾಡಿದರೆ ಸಂಗ್ರಹಕ್ಕೆ ಜಾಗ ಕಡಿಮೆ ಸಾಕಾಗಲಿದೆ. ಹಾಗಾಗಿ ದೊಡ್ಡ ಪ್ರಮಾಣದಲ್ಲಿ ಹೊಸ ತಂತ್ರಜ್ಞಾನ ವರದಿ ಬಂದ ಕೂಡಲೇ ಸಂಸ್ಕರಣ ಘಟಕ ಅಳವಡಿಸಲಾಗುತ್ತದೆ.
ಇನ್ನು ವಾಣಿಜ್ಯ ಸ್ಥಳದಲ್ಲಿ ಅಲ್ಲಿಯೇ ಸಂಸ್ಕರಣೆ ಮಾಡಬೇಕು. ಬಿಟಿಎಂ ಲೇಔಟ್ ನಲ್ಲಿ ಪ್ರಾಯೋಗಿಕವಾಗಿ ಇದನ್ನು ಮಾಡಲಾಗಿದೆ ಅಲ್ಲಿ ಯೋಜನೆ ಸಫಲವಾಗಿದೆ. ಅದನ್ನು ನೋಡಿ ಎಲ್ಲ ವಾರ್ಡ್ ನಲ್ಲಿ ಜಾರಿ ಮಾಡಲಿದ್ದೇವೆ. ಖಾಸಗಿ ಕಂಪನಿಗೆ ತಜ್ಞರ ನೇಮಿಸಿ ಎಲ್ಲ ಕಡೆ ಸಂಸ್ಕರಣ ಘಟಕ ಹಾಕಲು ಸಮಗ್ರ ಯೋಜನೆ ರೂಪಿಸಲಾಗುತ್ತದೆ. ಈಗಿರುವ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ಮಾಡಿಕೊಳ್ಳಬಹುದೋ ಮಾಡಿಕೊಳ್ಳುತ್ತೇವೆ. ಹೊಸ ತಂತ್ರಜ್ಞಾನ ಬಳಕೆಗೆ ಸಿದ್ದವಿದ್ದು, ತ್ಯಾಜ್ಯ ಸಮಸ್ಯೆ ಪರಿಹಾರಕ್ಕೆ ನಾವು ಬದ್ದವಾಗಿದ್ದೇವೆ ಎಂದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಹಸಿ ಒಣ ತ್ಯಾಜ್ಯ ಹೇಳಿದ್ದೀರಿ. ಇ- ತ್ಯಾಜ್ಯದ ಬಗ್ಗೆ ಏನು ಕ್ರಮ ಎಂದರು. ಇದಕ್ಕೆ ಉತ್ತರಿಸಿದ ಸಿಎಂ, ಇ ವೇಸ್ಟ್, ಆಸ್ಪತ್ರೆ ತ್ಯಾಜ್ಯ, ವಾಣಿಜ್ಯ, ಮಾರುಕಟ್ಟೆ ತ್ಯಾಜ್ಯಕ್ಕೆ ಪ್ರತ್ಯೇಕ ಟ್ರೀಟ್ ಮೆಂಟ್ ಕೊಡಬೇಕಿದೆ. ವಿಂಗಡಣೆ ಹಂತದಲ್ಲಿಯೇ ಇದನ್ನು ಮಾಡಲಾಗುತ್ತದೆ ಎಂದರು.
ಗ್ರಾಪಂ ಖಾಲಿ ಹುದ್ದೆ ಭರ್ತಿ : ಇನ್ನು ಮೂರ್ನಾಲ್ಕು ತಿಂಗಳುಗಳಲ್ಲಿ ರಾಜ್ಯದ ಎಲ್ಲ ಗ್ರಾಮ ಪಂಚಾಯತ್ ಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
6021 ಪಿಡಿಒ ಹುದ್ದೆಗಳಲ್ಲಿ 5029 ಭರ್ತಿಯಾಗಿದೆ. 726 ಹುದ್ದೆಗಳನ್ನು ಬಡ್ತಿಯಿಂದ ಭರ್ತಿ ಮಾಡಿ ಉಳಿದದ್ದನ್ನು ನೇಮಕಾತಿ ಮೂಲಕ ಭರ್ತಿ ಮಾಡಲು ಸೂಚಿಸಲಾಗಿದೆ. 635 ಕಾರ್ಯದರ್ಶಿ ಗ್ರೇಡ್ ಒನ್ಗಳಲ್ಲಿ 487 ಹುದ್ದೆಗಳ ನೇರ ನೇಮಕಾತಿ, ಗ್ರೇಡ್ - 2 ರಲ್ಲಿ 343 ಹುದ್ದೆಗಳಿಗೆ ನೇರ ನೇಮಕಾತಿಗೆ ಆದೇಶ ಕೊಡಲಾಗಿದೆ. ದ್ವಿತೀಯ ದರ್ಜೆ ಲೆಕ್ಕ ಪರಿಶೋಧಕರ 625 ರಲ್ಲಿ 125 ನೇರ ನೇಮಕ ಮತ್ತು ಉಳಿದದ್ದು ಬಡ್ತಿ ಅಡಿ ತುಂಬಲು ಕ್ರಮ ವಹಿಸಿದ್ದು, ಮುಂದಿನ ಮೂರ್ನಾಲ್ಕು ತಿಂಗಳಿನಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಅಮೃತ ಗ್ರಾಮ ಪಂಚಾಯತ್ ಯೋಜನೆಯಡಿ ಒಳ್ಳೆಯ ಕೆಲಸ ಮಾಡಿದ ಪಂಚಾಯಿತಿಗೆ 25 ಲಕ್ಷ ರೂ. ಹೆಚ್ಷುವರಿಯಾಗಿ ಕೊಡಲಿದ್ದೇವೆ. ಈ ಬಾರಿಯೂ 750 ಗ್ರಾಮಪಂಚಾಯತ್ ಗಳನ್ನು ಆಯ್ಕೆ ಮಾಡಿ ಒಳ್ಳೆಯ ಕೆಲಸ ಮಾಡಿದ ಗ್ರಾಪಂಗೆ ಪ್ರೋತ್ಸಾಹಧನ ಕೊಡಲಿದ್ದೇವೆ ಎಂದರು.
ಕೆಂಪೇಗೌಡ ಬಡಾವಣೆ ಸಮಗ್ರ ಅಭಿವೃದ್ಧಿಗೆ ಸೂಚನೆ : ಕೆಂಪೇಗೌಡ ಬಡಾವಣೆ ಸಮಗ್ರ ಅಭಿವೃದ್ಧಿ ಮಾಡಿ ಫಲಾನುಭವಿಗಳು ಮತ್ತು ಭೂಮಾಲೀಕರಿಗೆ ನಿವೇಶನಗಳ ಹಂಚಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಕೆ.ಎ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಿಎಂ, ಕೆಂಪೇಗೌಡ ಬಡವಾಣೆ ಸಂಪೂರ್ಣ ಅಭಿವೃದ್ಧಿ ಆಗಬೇಕು ಆಗ ಮಾತ್ರ ಜಮೀನು ಕಳೆದುಕೊಂಡವರಿಗೆ ನಿವೇಶನ ಸಿಗಲಿವೆ. ಈ ಬಗ್ಗೆ ಸಮಗ್ರ ಅಭಿವೃದ್ಧಿ ಮಾಡುವಂತೆ ಬಿಡಿಎಗೆ ಸೂಚನೆ ನೀಡಲಾಗಿದೆ. ಈಗಾಗಲೇ 6682 ಮೀಟರ್ ಜಾಗ ಕೊಡಲಾಗಿದೆ. ಆದರೆ ಸರ್ವೇ ನಂಬರ್ 8 ರಲ್ಲಿ ಜಾಗ ಕೇಳುತ್ತಿದ್ದಾರೆ.
ಆದರೆ, ಅಲ್ಲಿ ಬಹಳ ಕೇಸ್ ಇವೆ. ಹಾಗಾಗಿ ಅಲ್ಲಿ ಕೊಡಲಾಗುತ್ತಿಲ್ಲ. ಸರ್ವೆ ನಂಬರ್ 63 ರಲ್ಲಿ ಜಾಗ ನೀಡಲು ಸಿದ್ದವಿದ್ದೇವೆ. ಆದರೆ, ಅದಕ್ಕೆ ರೈತರು ಒಪ್ಪುತ್ತಿಲ್ಲ, ಯಾವುದೇ ನಿವೇಶನ ಕೊಟ್ಟರೂ ಸರಿಯಾಗಿ ಅಭಿವೃದ್ಧಿ ಪಡಿಸಿಯೇ ಕೊಡಲಿದ್ದೇವೆ. ಇದಕ್ಕೆ ಸರ್ಕಾರ ಸಿದ್ದವಿದೆ ಎಂದರು.
ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ : ರಾಜ್ಯದ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಲು ಗ್ರಾಮ ಪಂಚಾಯಿತಿ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಗ್ರಾಮೀಣ ಕ್ರೀಡೆಗಳ ಕ್ರೀಡಾಕೂಟ ಆಯೋಜನೆ ಮಾಡಲು ಸರ್ಕಾರ ನಿರ್ಧರಿಸಿದೆ. ಮಳೆ ಕಡಿಮೆಯಾದ ನಂತರ ಎರಡು ತಿಂಗಳ ಕಾಲ ಗ್ರಾಮೀಣ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಬಿ.ಎಸ್.ಅರುಣ್ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈ ವರ್ಷ ಗ್ರಾಮೀಣ ಕ್ರೀಡೆಯನ್ನು ಸರ್ಕಾರ ಮುತುವರ್ಜಿಯಿಂದ ಮಾಡಲು ತೀರ್ಮಾನವನ್ನು ತೆಗೆದುಕೊಂಡಿದೆ. ಗ್ರಾಮ ಪಂಚಾಯತ್ ನಿಂದ ಹಿಡಿದು, ತಾಲ್ಲೂಕು ಪಂಚಾಯತ್,ಜಿಲ್ಲಾ ಪಂಚಾಯತ್ ಹಾಗು ರಾಜ್ಯ ಮಟ್ಟದಲ್ಲಿ ಆಯೋಜನೆ ಮಾಡಲಾಗುತ್ತದೆ.
ಕಬ್ಬಡ್ಡಿ ,ಖೋಖೋ, ಕುಸ್ತಿ, ಎತ್ತಿಗಾಡಿ, ಮಲ್ಲಕಂಬ, ಕಂಬಳ ಇತ್ಯಾದಿಗಳ ಆಯೋಜನೆ ಮಾಡಲಾಗುತ್ತದೆ. ಇದೇ ತಿಂಗಳಿಂದ ಪ್ರಾರಂಭಿಸಬೇಕಿತ್ತು. ಮಳೆಯ ಕಾರಣ ಮುಂದೂಡಿಕೆಯಾಯಿತು. ಮಳೆ ಕಡಿಮೆಯಾಗುತ್ತಿದ್ದಂತೆ ಶುರು ಮಾಡಲಾಗುತ್ತದೆ. ಎರಡು ತಿಂಗಳ ಕಾಲ ಕ್ರೀಡಾಕೂಟ ನಡೆಯಲಿದೆ. ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡಲು ಈ ಕೂಟ ಆಯೋಜನೆ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ : ಧರ್ಮದ ಹೆಸರಿನಲ್ಲಿ ಭಯೋತ್ಪಾದಕರಾಗುತ್ತಿದ್ದಾರೆ, ಮತಾಂತರ ಕಾನೂನುಬದ್ಧ ಮಾಡುತ್ತಿದ್ದೇವೆ: ಸಿಎಂ