ಬೆಂಗಳೂರು: ಎಲ್ಲಿ ನೋಡಿದರೂ ಭಕ್ತರ ದಂಡು, ಹೂವಿನ ಅಲಂಕಾರ, ಬಣ್ಣ-ಬಣ್ಣದ ದೀಪಗಳಿಂದ ಕಂಗೊಳಿಸುತ್ತಿರುವ ದೇವಾಲಯ. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಗಂಗಮ್ಮ ಮತ್ತು ಕಾಟೇರಮ್ಮ ದೇವಿಯ ಜಾತ್ರಾ ಮಹೋತ್ಸವದ ಸಂಭ್ರಮ.
ಪ್ರತಿ ವರ್ಷದಂತೆ ಈ ವರ್ಷವೂ ಗಂಗಮ್ಮ ಮತ್ತು ಕಾಟೇರಮ್ಮ ದೇವಿಯ ಜಾತ್ರೆ ಬಹಳ ವಿಜೃಂಭಣೆಯಿಂದ ನೆರವೇರಿತು. 2 ದಿನಗಳ ಕಾಲ ನಡೆಯುವ ಈ ಜಾತ್ರೆಯು ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಮೊದಲ ದಿನ ರಾತ್ರಿ ದೇವರಿಗೆ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಗ್ರಾಮಸ್ಥರು ದೀಪಗಳಿಗೆ ಹೂವಿನಿಂದ ಅಲಂಕರಿಸಿ, ಅವುಗಳನ್ನು ಡೋಲುಗಳ ಮೂಲಕ ಬೀದಿಗಳಲ್ಲಿ ಮೆರವಣಿಗೆ ಮಾಡಿಕೊಂಡು ದೇವಸ್ಥಾನಕ್ಕೆ ಬಂದರು. ದೇವಸ್ಥಾನದ ಬಳಿ ಬಂದು ದೇವರಿಗೆ ಅಲಂಕರಿಸಿದ ದೀಪಗಳ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.
ಕಳೆದ 10 ವರ್ಷಗಳ ಹಿಂದೆ ದೇವನಹಳ್ಳಿಯಲ್ಲಿ ಗಂಗಮ್ಮದೇವಿ ಮತ್ತು ಕಾಟೇರಮ್ಮ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಿಯ ಮಹಿಮೆ ತಿಳಿದು ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಾ ಬಂದಿದೆ. ಪ್ರತಿ ವರ್ಷವೂ ಗಂಗಮ್ಮ-ಕಾಟೇರಮ್ಮ ದೇವಿಯ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ.