ಮನಸ್ಸಿಗೆ ಮದನೀಡುವ ಹಾಡುಗಳು. ಕಚಗುಳಿ ಇಡುವ ಪಂಚಿಂಗ್ ಡೈಲಾಗ್ಗಳಿಂದ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದ ಸಿನಿಮಾ ಗಾಳಿಪಟ 2. ಪ್ಯಾನ್ ಇಂಡಿಯಾ ಸಿನಿಮಾಗಳ ಮಧ್ಯೆ ನಮ್ಮದು ವಿಶ್ವ ಕನ್ನಡಿಗರ ಚಿತ್ರ ಎಂದೆನ್ನುತ್ತಲೇ ಥೀಯೆಟರ್‌ಗೆ ಲಗ್ಗೆ ಇಟ್ಟ ಸಿನಿಮಾ ಅಂದುಕೊಂಡಂತೆ ಭರ್ಜರಿ ಒಪನಿಂಗ್ ಪಡೆದುಕೊಂಡಿದೆ.
ನಟ ಗಣೇಶ್ ಹಾಗು ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್ನಲ್ಲಿ ಗಾಳಿಪಟ 2 ಅಂದುಕೊಂಡಂತೆ ಮೊದಲ ದಿನವೇ ಕರ್ನಾಟಕದ ಹಲವು ಥಿಯೇಟರ್ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಗಣಿ ಮತ್ತು ಭಟ್ಟರ ಜೋಡಿಗೆ ಪ್ರೇಕ್ಷಕರು ಫುಲ್ ಮಾರ್ಕ್ ಕೊಟ್ಟಿದ್ದಾರೆ. ಇಂದು ಗಣೇಶ್, ಯೋಗರಾಜ್ ಭಟ್ ಹಾಗು ನಿರ್ಮಾಪಕ ಎಂ ರಮೇಶ್ ರೆಡ್ಡಿ ಪ್ರೇಕ್ಷಕರ ಜೊತೆ ಕುಳಿತು ಸಿನಿಮಾ ವೀಕ್ಷಿಸಿದರು.
ನೀರುಕೋಟೆ ಅನ್ನೋ ಊರಲ್ಲಿರೋ ಕಾಲೇಜಿನಲ್ಲಿ ಶುರುವಾಗೋ ಸಿನಿಮಾದ ಕಥೆ, ಕಾಮಿಡಿ ಜೊತೆಗೆ ಮೂವರೂ ಸ್ನೇಹಿತರ ಪ್ರತ್ಯೇಕ ಲವ್ ಸ್ಟೋರಿ ಶುರುವಾಗುತ್ತೆ. ಗಣೇಶ್ ಜೋಡಿಯಾಗಿ ವೈಭವಿ ಶಾಂಡಿಲ್ಯ ಮಿಂಚಿದ್ರೆ, ದಿಗಂತ್ ಪ್ರೇಯಸಿಯಾಗಿ ಸಂಯುಕ್ತ ಮೆನೆನ್ ಅಭಿನಯಿಸಿದ್ದಾರೆ. ಪವನ್ ಕುಮಾರ್ಗೆ ಟೀಚರ್ ಮೇಲೆಯೇ ಲವ್ ಆಗುತ್ತೆ. ಈ ಮೂರು ಲವ್ ಸ್ಟೋರಿಗಳ ಮಧ್ಯೆ ಪ್ರೀತಿ, ತಮಾಷೆ, ಕೋಪ ಎಲ್ಲವೂ ಬಂದು ಹೋಗುತ್ತವೆ.
ಜೀವನದಲ್ಲಿ ಸೀರಿಯಸ್ನೆಸ್ ಇಲ್ಲದ ಗಣೇಶ ತನ್ನ ಗೆಳೆಯರಿಂದ ದೂರ ಆಗಿರುವ ಲವ್ ಸ್ಟೋರಿಗಳನ್ನು ಹೇಗೆ ಸರಿ ಮಾಡುತ್ತಾರೆ ಹಾಗು ಚಿಕ್ಕ ವಯಸ್ಸಿನಲ್ಲಿ ಮಗನನ್ನು ಕಳೆದುಕೊಂಡಿರುವ ಅನಂತ್ ನಾಗ್ ಮಗನನ್ನು ಹೇಗೆ ಮೀಟ್ ಮಾಡಿಸುತ್ತಾರೆ ಅನ್ನೋದು ಗಾಳಿಪಟ 2 ಚಿತ್ರದ ಕಥೆ.
ಯೋಗರಾಜ್ ಭಟ್, ಅಪ್ಪ-ಅಮ್ಮನ ಸಂಬಂಧ ಏನು? ಸ್ನೇಹ ಅಂದ್ರೆ ಏನು ಅನ್ನೋದನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ತಂದಿದ್ದಾರೆ. ಎಷ್ಟು ಕೋಪ ಇದ್ರೂ ಸದಾ ತರ್ಲೆ ಹಾಗು ತಮಾಷೆ ಮಾಡುವ ಗಣೇಶ್, ಕ್ಲೈಮಾಕ್ಸ್ನಲ್ಲಿ ಕಾರಿನಲ್ಲಿ ಕೂತು ಅಳುವ ಸನ್ನಿವೇಶ ನೋಡುಗರ ಕಣ್ಣಲ್ಲಿ ನೀರು ತರಿಸುತ್ತದೆ.
ರಂಗಾಯಣ ರಘು, ಸುಧಾ ಬೆಳವಾಡಿ, ಪದ್ಮಜಾ ರಾವ್ ಹಾಗು ನಿಶ್ವಿಕಾ ನಾಯ್ಡ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಕ್ಯಾಮರಾಮ್ಯಾನ್ ಕೈ ಚಳಕ ಹಾಗು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಡುಗಳು ಚಿತ್ರದ ಪ್ಲಸ್ ಪಾಯಿಂಟ್.
ಇದನ್ನೂ ಓದಿ: ಲಾಲ್ಸಿಂಗ್ ಚಡ್ಡಾ ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನವೇ ಕಳಪೆ ಪ್ರದರ್ಶನ