ಬೆಂಗಳೂರು : ಲಾಕ್‌ಡೌನ್ ಸಂದರ್ಭ ರಾಜ್ಯ ಮತ್ತು ಕೇಂದ್ರ ಸರ್ಕಾರ ಬಡವರಿಗೆ ಉಚಿತ ಪಡಿತರ ಪೂರೈಕೆ ಮಾಡಿ, ದುಡಿಮೆ ಇಲ್ಲದ ಹಸಿದ ಹೊಟ್ಟೆಗಳಿಗೆ ಆಹಾರ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಅನ್ನಭಾಗ್ಯವನ್ನು ನೀಡಿತ್ತು. ಲಾಕ್‌ಡೌನ್ ಸಮಯದಲ್ಲಿ ಸರ್ಕಾರ ನೀಡಿದ ಉಚಿತ ಪಡಿತರದ ಸ್ಥಿತಿಗತಿ ಮತ್ತು ಕೇಳಿ ಬರುತ್ತಿರುವ ಅಕ್ರಮದ ಆರೋಪ ಏನು ಎಂಬುದರ ಕುರಿತು ಸಮಗ್ರ ವರದಿ ಇಲ್ಲಿದೆ.
ಕೊರೊನಾ ತಡೆಗಟ್ಟಲು ಸರ್ಕಾರ ಲಾಕ್‌ಡೌನ್ ಘೋಷಿಸಿತ್ತು. ಇದರಿಂದ ದಿನಗೂಲಿ ನೌಕರರು, ಕಾರ್ಮಿಕರು, ಬಡವರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಇವರಿಗೆ ದುಡಿಮೆ ಇಲ್ಲದೆ ಒಪ್ಪೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಎದುರಾಗಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಹಸಿದ ಬಡವರ, ನೊಂದವರ ಹೊಟ್ಟೆ ತುಂಬಿಸಲು ಉಚಿತ ಪಡಿತರವನ್ನು ಪೂರೈಸುವ ಯೋಜನೆ ಘೋಷಿಸಿತ್ತು. ಏಪ್ರಿಲ್ನಿಂದ ಜೂನ್ವರೆಗೆ ನೀಡಿದ ಪಡಿತರ ಚೀಟಿ ಹೊಂದಿದವರಿಗೂ, ಹೊಂದಿಲ್ಲದವರಿಗೂ ಉಚಿತ ಅಕ್ಕಿ ನೀಡಲು ನಿರ್ಧರಿಸಿತ್ತು.
ವಿತರಿಸಿದ ಉಚಿತ ಪಡಿತರ ಎಷ್ಟು? : ರಾಜ್ಯ ಸರ್ಕಾರ ತನ್ನ ಪಾಲು ಸೇರಿ ಕೇಂದ್ರ ಘೋಷಿಸಿದ ಉಚಿತ ಪಡಿತರವನ್ನು ಏಪ್ರಿಲ್ ತಿಂಗಳಿಂದ ವಿತರಿಸಲು ಪ್ರಾರಂಭಿಸಿತ್ತು. ಅದರಂತೆ ಏಪ್ರಿಲ್ ತಿಂಗಳಲ್ಲಿ ರಾಜ್ಯ ಸರ್ಕಾರ 1.13 ಕೋಟಿ ಪಡಿತರ ಚೀಟಿದಾರರಿಗೆ ಮತ್ತು 3.87 ಕೋಟಿ ಸದಸ್ಯರಿಗೆ ಉಚಿತ ಪಡಿತರವನ್ನು ವಿತರಿಸಿದೆ. ಅಂದರೆ ಏಪ್ರಿಲ್ ತಿಂಗಳಲ್ಲಿ ಸುಮಾರು 91.88% ಪಡಿತರ ಕಾರ್ಡುದಾರರಿಗೆ ಉಚಿತ ಪಡಿತರವನ್ನು ಸರ್ಕಾರ ವಿತರಿಸಿದೆ. ಸುಮಾರು 41.81 ಲಕ್ಷ ಕ್ವಿಂಟಾಲ್ ಪಡಿತರವನ್ನು ಉಚಿತವಾಗಿ ವಿತರಿಸಲಾಗಿದೆ.
ಅದೇ ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಒಟ್ಟು 1.19 ಕೋಟಿ ಪಡಿತರ ಚೀಟಿ ಹೊಂದಿದವರು ಉಚಿತ ಅಕ್ಕಿಯನ್ನು ಮತ್ತು ತೊಗರಿ ಬೇಳೆಯನ್ನು ಪಡೆದಿದ್ದಾರೆ. ಅಂದರೆ ಸುಮಾರು 93.25% ಪಡಿತರದಾರರಿಗೆ ಪಡಿತರ ವಿತರಿಸಲಾಗಿದೆ ಎಂದು ಆಹಾರ ಇಲಾಖೆ ನೀಡಿದ ಅಂಕಿಅಂಶದಲ್ಲಿ ತಿಳಿಸಲಾಗಿದೆ.
ಜೂನ್ ತಿಂಗಳಲ್ಲಿ ರಾಜ್ಯ ಸರ್ಕಾರ 1.13 ಕೋಟಿ ಪಡಿತರ ಚೀಡಿದಾರರಿಗೆ ಪಡಿತರ ವಿತರಿಸಿದ್ರೆ, 3.87 ಕೋಟಿ ಸದಸ್ಯರಿಗೆ ಪಡಿತರವನ್ನು ಪೂರೈಕೆ ಮಾಡಲಾಗಿದೆ. 90.90% ರೇಷನ್ ಕಾರ್ಡ್‌ದಾರರು ಪಡಿತರವನ್ನು ಪಡೆದಿದ್ದಾರೆ. ಸುಮಾರು 20.73 ಲಕ್ಷ ಕ್ವಿಂಟಾಲ್ ಪಡಿತರವನ್ನು ವಿತರಿಸಲಾಗಿದೆ.
ವಲಸಿಗರಿಗೆ ವಿತರಿಸಿದ ರೇಷನ್ ಎಷ್ಟು?:
ಇದೇ ವೇಳೆ ಪಡಿತರ ಹೊಂದಿಲ್ಲದ ವಲಸಿಗರಿಗೂ ಸರ್ಕಾರ ಉಚಿತ ಪಡಿತರವನ್ನು ವಿತರಿಸಿದ್ದು, ಅದರಂತೆ ಮೇ ತಿಂಗಳಲ್ಲಿ 3,20,576 ವಲಸಿಗರಿಗೆ ಉಚಿತ ಪಡಿತರ ವಿತರಿಸಲಾಗಿದೆ. ಸುಮಾರು 16,028 ಕ್ವಿಂಟಾಲ್ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗಿದೆ. ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ 10.16 ಲಕ್ಷ ವಲಸೆ ಕಾರ್ಮಿಕರು ಉಚಿತ ಪಡಿತರ ಪಡೆದಿದ್ದು, ಒಟ್ಟು 91,621 ಕ್ವಿಂಟಾಲ್ ಅಕ್ಕಿ ಮತ್ತು 19,092 ಬೇಳೆ ವಿತರಿಸಲಾಗಿದೆ.
ಇತ್ತ ಪಡಿತರ ವಿತರಣೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆನೇಕಲ್ನಲ್ಲಿ ಬಿಜೆಪಿ ಮುಖಂಡರು ಪಡಿತರವನ್ನು ಅಕ್ರಮವಾಗಿ ಶೇಖರಿಸಿ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ದಾಖಲೆ ಸಮೇತ ಆರೋಪಿಸಿದ್ದರು. ಹಲವೆಡೆ ನೀಡಬೇಕಾದ ಪಡಿತರ ಪ್ರಮಾಣದ ತೂಕದಲ್ಲಿ ಕಡಿಮೆ ಮಾಡಿ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ. ಉಚಿತ ಪಡಿತರ ವಿತರಣೆಯಲ್ಲಿ ಅವ್ಯಾಹತವಾಗಿ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ಪ್ರತಿಪಕ್ಷ ಮಾಡುತ್ತಿದೆ.
ಅಕ್ರಮದ ಆರೋಪ ಏನು?: ಇತ್ತ ವಲಸಿಗರಿಗೆ ನೀಡುವ ಉಚಿತ ಆಹಾರ ಕಿಟ್ ಮೇಲೆ ಜನಪ್ರತಿನಿಧಿಗಳು ತಮ್ಮದೇ ಹೆಸರು ಹಾಕಿ ವಿತರಣೆ ಮಾಡುತ್ತಿದ್ದ ಬಗ್ಗೆನೂ ಸಾಕಷ್ಟು ಆರೋಪ ಕೇಳಿ ಬಂದಿದೆ. ಅನೇಕರಿಗೆ ಸರ್ಕಾರ ಘೋಷಿಸಿದ ಉಚಿತ ಪಡಿತರ ತಲುಪಿಲ್ಲ. ಬದಲಿಗೆ ಉಚಿತ ಪಡಿತರವನ್ನು ಅನೇಕ ಪಡಿತರ ಅಂಗಡಿ, ಡೀಲರ್ಗಳು ಕಾನೂನು ಬಾಹಿರವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅಕ್ರಮ ಪಡಿತರ ಸಾಗಾಟ ಎಷ್ಟು?: ಲಾಕ್‌ಡೌನ್ ವೇಳೆ ವಿತರಿಸಿದ ಉಚಿತ ಪಡಿತರಕ್ಕೂ ಖದೀಮರು ಕನ್ನ ಹಾಕಿದ್ದಾರೆ. ಸುಮಾರು 70 ಅಕ್ರಮ ಪಡಿತರ ಸಾಗಾಟದ ಪ್ರಕರಣವನ್ನು ದಾಖಲಿಸಲಾಗಿದೆ. ಒಟ್ಟು 60 ಮಂದಿ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಅಕ್ರಮ ಸಾಗಾಟದ ಆರೋಪದಲ್ಲಿ 130 ಆರೋಪಿಗಳನ್ನು ಬಂಧಿಸಲಾಗಿದೆ. ಬರೋಬ್ಬರಿ 3.98 ಕೋಟಿ ರೂ. ಮೌಲ್ಯದ ಪಡಿತರ ಆಹಾರ ಧಾನ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಸುಮಾರು 8,473 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದ್ರೆ, 107.63 ಪಡಿತರ ಬೇಳೆಕಾಳನ್ನು ಜಪ್ತಿ ಮಾಡಲಾಗಿದೆ. ಅದೇ ರೀತಿ 111.23 ಕ್ವಿಂಟಾಲ್ ಗೋಧಿಯನ್ನು ಜಪ್ತಿ ಮಾಡಾಗಿದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
ಸಚಿವರು ಹೇಳುವುದೇನು?:
ಕಟ್ಟಕಡೆಯ ವ್ಯಕ್ತಿಗೂ ಆಹಾರ ಸಿಗುವ ನಿಟ್ಟಿನಲ್ಲಿ ಆಹಾರ ಇಲಾಖೆ ಪ್ರಮಾಣಿಕ ಕೆಲಸ ಮಾಡಿದೆ. ಪಡಿತರ ಚೀಟಿ ಇಲ್ಲದವನಿಗೂ ಆತ ಹಸಿವಿನಲ್ಲಿ ಇರಬಾರದು ಎಂದು ಆಹಾರ ನೀಡಲಾಗಿದೆ. ಸುಮಾರು 95%ದಷ್ಟು ಪಡಿತರವನ್ನು ಪೂರೈಕೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.
ಪಡಿತರ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದ್ದು, ಪಡಿತರ ವಿತರಣೆ ವೇಳೆ ಸಣ್ಣಪುಟ್ಟ ಲೋಪದೋಷ ಆಗಿರಬಹುದು. ನಾನೇ ಖುದ್ದು 24 ಜಿಲ್ಲೆಗಳಿಗೆ ಪ್ರವಾಸ ಮಾಡಿ, ಪರಿಶೀಲನೆ ನಡೆಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.