ಬೆಂಗಳೂರು : ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸ್ಮರಣಾರ್ಥವಾಗಿ ಜೆ.ಜೆ. ನಗರದ ಅಲ್ ಅಜಹರ್ ಫೌಂಡೇಷನ್ ಶಾಲೆಯಲ್ಲಿ ಮೆಡಿಕಲ್ ಕ್ಯಾಂಪ್ ಆಯೋಜಿಸಲಾಗಿದೆ. ಈ ಕ್ಯಾಂಪ್ನಲ್ಲಿ ಹೃದ್ರೋಗ, ಸಕ್ಕರೆ ಕಾಯಿಲೆ, ದಂತ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಸಂಬಂಧಿ ತಪಾಸಣೆ ಮಾಡಲಾಗುವುದು.
ಬೆಳಗ್ಗೆ 9 ಗಂಟೆಗೆ ಆರಂಭಗೊಂಡಿರುವ ಕ್ಯಾಂಪ್ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಇನ್ನು ಉಚಿತ ಕ್ಯಾಂಪ್ನಲ್ಲಿ ಸುಗುಣ ಆಸ್ಪತ್ರೆ, ಸ್ಮೈಲ್ ಇನ್ಸ್ಟಿಟ್ಯೂಟ್, ವಿಜಯನಗರ ಆಸ್ಪತ್ರೆ ಹಾಗೂ ಎನ್ಸಿಆರ್ಡಿ ಭಾಗಿಯಾಗಲಿವೆ.
ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಹೆಚ್1ಎನ್1 ಸೋಂಕಿನಿಂದ ಬಳಲಿ ಚಿಕಿತ್ಸೆ ಫಲಿಸದೇ ಕೆಲ ತಿಂಗಳ ಹಿಂದೆ ಸಾವನ್ನಪ್ಪಿದರು. ಮೂಲತಃ ಉಡುಪಿಯವರಾಗಿದ್ದು 1999 ಬ್ಯಾಚ್‌ನ ಐಪಿಎಸ್ ಅಧಿಕಾರಿ ಯಾಗಿದ್ದರು. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯುವ ಮುನ್ನ ಅವರು ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ ಸಮಾಜ ಶಾಸ್ತ್ರದಲ್ಲಿ ಎಂ.ಎ. ವ್ಯಾಸಂಗ ಮಾಡಿದ್ದರು. ಮೊದಲು ಚಿಕ್ಕಮಗಳೂರು ಜಿಲ್ಲೆಯ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಡಿಸಿ ಹರ್ಷ ಗುಪ್ತ ಜತೆಗೂಡಿ ದಲಿತ ಸಮುದಾಯದ ಬೆನ್ನೆಲುಬಾಗಿ ನಿಂತಿದ್ದರು. ದಲಿತ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದ ವ್ಯಕ್ತಿಗಳಿಂದ ಜಮೀನು ಬಿಡಿಸಿ ದಲಿತರಿಗೆ ನೀಡಿದ್ದರು. ಬಳಿಕ ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿರುದ್ಧ ಬೇಸರಗೊಂಡು ಉನ್ನತ ವಿದ್ಯಾಭ್ಯಾಸಕ್ಕೆ ರಜೆಯಲ್ಲಿ 2011ರಲ್ಲಿ ತೆರಳಿದರು. ಐಜಿಪಿಯಾಗಿ ಭಡ್ತಿ ಪಡೆದು ಕೆಲ ಕಾಲ ಪೊಲೀಸ್ ನೇಮಕಾತಿ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ತದನಂತರ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.