ಬೆಂಗಳೂರು : ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದಿದ್ದು, ಜಾರಿಯಾದ ಎರಡನೆಯ ದಿನವೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿರುವ ಮಹಿಳೆಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಮೊದಲ ಹೆಜ್ಜೆ ಎನ್ನುವ ಘೋಷ ವಾಕ್ಯದೊಂದಿಗೆ ಎಲ್ಲ ರಸ್ತೆ ಸಾರಿಗೆ ನಿಗಮಗಳ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಿವೆ.
ಬಿಎಂಟಿಸಿ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಗರದ ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಿಶೇಷ ಬೀದಿ ನಾಟಕ ಪ್ರದರ್ಶನವನ್ನು ಕಲಾ ತಂಡಗಳು ಮತ್ತು ಸಿಬ್ಬಂದಿಗಳು ನಡೆಸಿದರು. ಸಿಬ್ಬಂದಿಗಳ ಮತ್ತು ಪ್ರಯಾಣಿಕರ ಪಾತ್ರವನ್ನು ನಿರ್ವಹಿಸಿ ನೆರೆದ ಪ್ರಯಾಣಿಕರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ಮುಂದಾದರು.
ಬಿಎಂಟಿಸಿ ಎಂಡಿ ಸತ್ಯವತಿ ಅವರ ನಿರ್ದೇಶನದಂತೆ ನಾಟಕ ಪ್ರದರ್ಶನಗಳನ್ನು ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆ ಆಯೋಜಿಸಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಯೋಜನೆಯ ಸದ್ಬಳಕೆ ಮತ್ತು ಲಾಭದ ಕುರಿತು ಅರಿವು ಮೂಡಿಸಲು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾರಿಗೆ ನಿಗಮದ ಸಿಬ್ಬಂದಿಗಳು ತಿಳಿಸಿದ್ದಾರೆ.
ಉಚಿತ ಪ್ರಯಾಣದ ಕುರಿತು ಹಿರಿಯ ಮಹಿಳಾ ಪ್ರಯಾಣಿಕರೊಬ್ಬರು ಈಟಿವಿ ಭಾರತದ ಜೊತೆ ಮಾತನಾಡಿ, ಇವತ್ತು ಉಚಿತ ಪ್ರಯಾಣ ಒದಗಿಸಿದ ನಂತರ ಮೊದಲ ಬಾರಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ಬಸವೇಶ್ವರ ನಗರದಿಂದ ಮಾರ್ಕೆಟ್ ಗೆ ತೆರಳುತ್ತಿದ್ದೇನೆ. ರಾಜ್ಯ ಸರ್ಕಾರದ ಈ ನಡೆ ಮಹಿಳೆಯರಿಗೆ, ಹಿರಿಯರಿಗೆ ಅನುಕೂಲವಾಗಿದೆ ಎಂದರು. ಮತ್ತೊಬ್ಬ ಪ್ರಯಾಣಿಕರಾದ ಟೌನ್ ಹಾಲ್ ಬಳಿಯಲ್ಲಿ ವಾಸವಾಗಿರುವ ತಾರಾ ಎಂಬುವವರು ಮಾತನಾಡಿ, ಬಡ ಹೆಣ್ಣುಮಕ್ಕಳಿಗೆ ಈ ಯೋಜನೆಯಿಂದ ಅನುಕೂಲವಾಗಿದೆ. ತಿಂಗಳಿಗೆ ಸುಮಾರು 2 ಸಾವಿರ ರೂಪಾಯಿ ಉಳಿತಾಯವಾಗಲಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿದೆ ಎಂದು ಹೇಳಿದರು.
ತಮಿಳುನಾಡು ಮೂಲದ ಮಹಿಳಾ ಪ್ರಯಾಣಿಕರಾದ ಲಕ್ಷ್ಮಿ ತಮ್ಮ ಅಳಲನ್ನು ತೋಡಿಕೊಂಡಿದ್ದು, ನಾನು ರಾಮನಗರಕ್ಕೆ ಹೋಗಿ ಹೂವುಗಳ ವ್ಯಾಪಾರ ನಡೆಸುತ್ತೇನೆ. ಆದರೆ ಆಧಾರ್ ಕಾರ್ಡ್ನಲ್ಲಿ ಕರ್ನಾಟಕದ ವಿಳಾಸವಿಲ್ಲ. ಹೀಗಾಗಿ ದುಡ್ಡು ಕೊಟ್ಟು ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದೇನೆ. ತಮಿಳುನಾಡಿನಲ್ಲಿ ಯವುದೇ ದಾಖಲಾತಿಯಿಲ್ಲದೆ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡಬಹುದು. ಹೀಗೆಯೇ ಇಲ್ಲಿಯೂ ಈ ನಿಯಮ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.
ನಾನು ಹೆಚ್ಚಾಗಿ ಬೀದಿ ಬದಿಯಲ್ಲಿ ವಾಸಿಸುತ್ತೇನೆ. ಮಕ್ಕಳು, ಸಂಬಂಧಿಕರು ಸೇರಿದಂತೆ ಯಾರೂ ನೋಡಿಕೊಳ್ಳುವವರು ಇಲ್ಲ. ನಮ್ಮ ಸಹಾಯಕ್ಕೆ ಕೂಡ ಸರ್ಕಾರ ಬರಬೇಕು. ಕಡು ಬಡವರಿಗೆ, ಬೀದಿ ಬದಿಯಲ್ಲಿ ವಾಸಿಸುವವವರಿಗೆ ದಾಖಲೆಗಳು ಇರುವುದಿಲ್ಲ. ಹೀಗಾಗಿ ಯಾವುದೇ ಷರತ್ತುಗಳನ್ನು ವಿಧಿಸದೆ ಪ್ರಯಾಣಿಸಲು ಶೀಘ್ರದಲ್ಲಿಯೇ ಅನುವು ಮಾಡಿಕೊಡಬೇಕು ಎಂದು ಕೋರಿದರು.
ಬಸ್ನಲ್ಲಿ ಉಚಿತ ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ ಎಷ್ಟು ಗೊತ್ತಾ? : ರಾಜ್ಯಾದ್ಯಂತ ಶಕ್ತಿ ಯೋಜನೆ ಜಾರಿದ ನಿನ್ನೆ (ಭಾನುವಾರ) ಮಧ್ಯಾಹ್ನ 1 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಸುಮಾರು 5 ಲಕ್ಷದ 71 ಸಾವಿರಕ್ಕೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಕೆಎಸ್ಆರ್ಟಿಸಿ ಯಲ್ಲಿ 1,93,83 ಮಹಿಳೆಯರು, ಬಿಎಂಟಿಸಿಯಲ್ಲಿ 2,01,215 ಮಹಿಳೆಯರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಲ್ಲಿ 1,22,354 ಲಕ್ಷ ಮಹಿಳೆಯರು, ಹಾಗು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ 53,623, ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಇದನ್ನೂ ಓದಿ : Congress Guarantee: ಮಂಗಳೂರಿನ ಸರ್ಕಾರಿ ಬಸ್ ಓಡಾಡುವ ಮಾರ್ಗದಲ್ಲಿ ಖಾಸಗಿ ಬಸ್ಗಳಿಗೆ ಮಹಿಳಾ ಪ್ರಯಾಣಿಕರ ಕೊರತೆ