ಬೆಂಗಳೂರು: ರಾಜಾಜಿನಗರದಲ್ಲಿ ಬಿಜೆಪಿ ಘಟಕದ ವತಿಯಿಂದ ಆಮ್ಲಜನಕ ವ್ಯವಸ್ಥೆ ಇರುವ ಉಚಿತ ಆ್ಯಂಬುಲೆನ್ಸ್ ಸೇವೆ ಪ್ರಾರಂಭಿಸಲಾಗಿದ್ದು, ಅಗತ್ಯವಿರುವವರಿಗೆ ಆಸ್ಪತ್ರೆಗೆ ಸೇರಿಸಲು ಸಹಾಯವಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಆಂಬ್ಯುಲೆನ್ಸ್ ಸೇವೆ ಉದ್ಘಾಟಿಸಿ ಮತನಾಡಿದ ಅವರು, ಸುಮಾರು 20 ಆಮ್ಲಜನಕ ಸಿಲಿಂಡರ್ಗಳ ಮೂಲಕ ಅಗತ್ಯವಿರುವ ವ್ಯಕ್ತಿಗಳ ಮನೆಗೆ ಆಮ್ಲಜನಕ ಪೂರೈಸುವ ಕಾರ್ಯ ಪ್ರಾರಂಭಿಸಲಾಗಿದೆ. ಭಾಷ್ಯಂ ವೃತ್ತದ ಬಳಿಯಿರುವ ಡಾಕ್ಟರ್ ನಾಗರಾಜ ಆಸ್ಪತ್ರೆಯಲ್ಲಿ 20 ಆಮ್ಲಜನಕ ಪೂರೈಕೆಯುಳ್ಳ ಸಿದ್ಧಪಡಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಕಾರ್ಯಾರಂಭಗೊಳ್ಳಲಿದೆ.
ಇದರೊಂದಿಗೆ ಕೋವಿಡ್ ವಾರಿಯರ್ಗಳಿಗಾಗಿ ಚೈತನ್ಯ ಕೇಂದ್ರವೊಂದನ್ನು ಪ್ರಾರಂಭಿಸುತ್ತಿದ್ದೇವೆ. ಅಲ್ಲಿ ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ದಾದಿಯರು, ವೈದ್ಯರು ಹಾಗೂ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರು ಬಂದು ಸ್ಟೀಮ್ ಪಡೆಯಬಹುದಾಗಿದೆ, ಕುಡಿಯಲು ಸದಾ ಕಷಾಯ, ಬಿಸಿ ನೀರು ಸಹ ಲಭ್ಯವಿರುತ್ತದೆ ಎಂದು ಹೇಳಿದರು.