ಬೆಂಗಳೂರು : ಆ್ಯಂಬಿಡೆಂಟ್, ಅಜ್ಮೇರಾ ಗ್ರೂಪ್ಸ್ ಹಾಗೂ ಇಂಜಾಸ್ ಇಂಟರ್‌ನ್ಯಾಷನಲ್ ಸೇರಿದಂತೆ ಹೂಡಿಕೆದಾರರಿಗೆ ವಂಚನೆ ಮಾಡಿದ ಆರೋಪ ಹೊತ್ತಿರುವ 9 ಸಂಸ್ಥೆಗಳ ವಿರುದ್ಧ ಸಕ್ಷಮ ಪ್ರಾಧಿಕಾರಗಳು ಕೈಗೊಂಡಿರುವ ವರದಿ ಸಲ್ಲಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ 2 ವಾರ ಕಾಲಾವಕಾಶ ನೀಡಿದೆ.
ಈ ಕುರಿತಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು, ಆ್ಯಂಬಿಡೆಂಟ್, ಅಜ್ಮೇರಾ ಸೇರಿದಂತೆ ವಂಚಕ ಕಂಪನಿಗಳ ಆಸ್ತಿ ಜಪ್ತಿ ಹಾಗೂ ಹೂಡಿಕೆದಾರರ ಹಣ ವಾಪಸ್ ಮಾಡುವ ವಿಚಾರದಲ್ಲಿ ಸಕ್ಷಮ ಪ್ರಾಧಿಕಾರಗಳನ್ನು ನೇಮಕ ಮಾಡಲಾಗಿದೆ.
ಆದರೆ, ಪ್ರಾಧಿಕಾರದ ಅಧಿಕಾರಿಗಳು ಪದೇ ಪದೇ ಬದಲಾವಣೆ ಮತ್ತು ವರ್ಗಾವಣೆ ಆಗಿದ್ದಾರೆ. ಇದರಿಂದ ಆಯಾ ಕಂಪನಿಗಳ ವಿಚಾರದಲ್ಲಿ ಸಕ್ಷಮ ಪ್ರಾಧಿಕಾರಗಳು ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಲು ವಿಳಂಬವಾಗಿದೆ. ಎರಡು ವಾರ ಕಾಲಾವಕಾಶ ನೀಡಿದರೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರದ ಪರ ವಕೀಲರ ಮನವಿ ಪರಿಗಣಿಸಿದ ಪೀಠ, ಸಕ್ಷಮ ಪ್ರಾಧಿಕಾರಗಳ ವರದಿ ಸಲ್ಲಿಸಲು ಸರ್ಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.