ಬೆಂಗಳೂರು: ಫ್ರಾನ್ಸ್ ಸರ್ಕಾರವು ರಾಜ್ಯದಲ್ಲಿ ಇಂಡೋ-ಫ್ರೆಂಚ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಉತ್ಸುಕವಾಗಿದ್ದು, ಆರೋಗ್ಯ, ಇಂಡಸ್ಟ್ರಿ 4.0 ಮತ್ತು ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಅವಳಿ ಪದವಿ ನೀಡಲಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಭಾರತದಲ್ಲಿ ಫ್ರಾನ್ಸ್ ದೇಶದ ನೂತನ ಕಾನ್ಸುಲ್ ಜನರಲ್ ಆಗಿ ನೇಮಕಗೊಂಡಿರುವ ಥಿಯರಿ ಬರ್ತೆಲೋಟ್ ಅವರು ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಈ ಕ್ಯಾಂಪಸ್ ಆರಂಭಿಸಲು ಬೆಂಗಳೂರು ನಗರ ವಿಶ್ವವಿದ್ಯಾಲಯವು ಸೂಕ್ತವಾಗಿದೆ ಎಂದು ಫ್ರೆಂಚ್ ನಿಯೋಗಕ್ಕೆ ತಿಳಿಸಲಾಗಿದೆ ಎನ್ನಲಾಗುತ್ತಿದೆ.
ಬಳಿಕ ಸಚಿವರು ಮಾತನಾಡಿದ್ದು, ಆರೋಗ್ಯ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಔಷಧಗಳು ಮತ್ತು ಆರೋಗ್ಯ ಉತ್ಪನ್ನಗಳು, ಔಷಧ ವಿಜ್ಞಾನ ನಿರ್ವಹಣೆ, ಸುಧಾರಿತ ಫಾರ್ಮಾಸುಟಿಕಲ್ ಇಂಜಿನಿಯರಿಂಗ್ ಕ್ಷೇತ್ರ, ಇಂಡಸ್ಟ್ರಿ 4.0 ಅಡಿಯಲ್ಲಿ ಸೈಬರ್ ಸೆಕ್ಯುರಿಟಿ, ಡೇಟಾ ಅನಾಲಿಟಿಕ್ಸ್, ಮಶಿನ್ ಲರ್ನಿಂಗ್ ಮುಂತಾದ ವಿಭಾಗಗಳಲ್ಲಿ ಮತ್ತು ಪರಿಸರ ಶಾಸ್ತ್ರದಲ್ಲಿ ಜೀವವೈವಿಧ್ಯ, ಹವಾಮಾನ ಬದಲಾವಣೆ, ಪರಿಸರಸ್ನೇಹಿ ಆರ್ಥಿಕತೆ ವಿಭಾಗಗಳಲ್ಲಿ ಉದ್ದೇಶಿತ ಕ್ಯಾಂಪಸ್ನಲ್ಲಿ ಅವಳಿ ಪದವಿ (ಇಂಡೋ-ಫ್ರೆಂಚ್ ಡಿಗ್ರಿ)ಗಳನ್ನು ನೀಡಲಾಗುವುದು ಎಂದು ವಿವರಿಸಿದರು.
ಮುಂದಿನ ದಿನಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ಇಂಡೋ-ಫ್ರೆಂಚ್ ಸಹಯೋಗದ ಕ್ಯಾಂಪಸ್ನಲ್ಲಿ ಪಠ್ಯಕ್ರಮ ಇತ್ಯಾದಿಗಳನ್ನು ಕೈಗಾರಿಕೆಗಳಿಗೆ ಇರುವ ಅಗತ್ಯದಂತೆ ರೂಪಿಸಲಾಗುವುದು. ಜೊತೆಗೆ ಸಂಶೋಧನಾ ಸಂಸ್ಥೆ ಮತ್ತು ಇನ್ಕ್ಯುಬೇಟರ್ ಅನ್ನು ಸ್ಥಾಪಿಸಲು ಒತ್ತು ಕೊಡಲಾಗುವುದು. ಈ ಮೂಲಕ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಕೌಶಲ್ಯಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಶಿಕ್ಷಣದಲ್ಲಿ ಜಾಗತಿಕ ಗುಣಮಟ್ಟಕ್ಕೆ ಆದ್ಯತೆ ಕೊಡಲಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಪದವೀಧರರಾದರೆ ಸಾಲದು. ಅವರು ಸಮಕಾಲೀನ ವೃತ್ತಿಗಳಿಗೆ ಬೇಕಾದ ಅತ್ಯಾಧುನಿಕ ಕೌಶಲ್ಯಗಳನ್ನು ಕೂಡ ಕಲಿಸಲಾಗುವುದು. ಈ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವತ್ತ ದಾಪುಗಾಲಿಡಲಾಗುತ್ತಿದೆ ಎಂದರು.
ಉದ್ಯೋಗದಾತ ಕಂಪನಿಗಳ ಅಗತ್ಯ ಮತ್ತು ಬೇಡಿಕೆಯನ್ನು ಬೆರಳತುದಿಯಲ್ಲಿ ತಿಳಿದುಕೊಳ್ಳಲೆಂದೆ ಕೈಗಾರಿಕೆಗಳನ್ನು ಶಿಕ್ಷಣ ಸಂಸ್ಥೆಗಳೊಂದಿಗೆ ಬೆಸೆಯಲಾಗುತ್ತಿದೆ. ಇನ್ಮುಂದೆ ಶೈಕ್ಷಣಿಕ ವರ್ಷವಿಡಿ ಈ ಕಂಪನಿಗಳು ಶಿಕ್ಷಣ ಸಂಸ್ಥೆಗಳೊಂದಿಗೆ ಸಕ್ರಿಯ ಸಂಬಂಧ ಹೊಂದಿರಲಿದೆ ಎಂದರು.