ಬೆಂಗಳೂರು: ಅಪಾರ್ಟ್ ಮೆಂಟ್ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಹೈ ಫೈ ಕಾರು ಕಳ್ಳತನ ಮಾಡುತ್ತಿದ್ದುದನ್ನು ತಡೆಯಲು ಮುಂದಾದ ಮಾಲೀಕನಿಗೆ ಚಾಕು ತೋರಿಸಿ ಬೆದರಿಸಿದ್ದ ಇಬ್ಬರು ಖದೀಮರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಸದಾಶಿವನಗರದ 10ನೇ ಅಡ್ಡರಸ್ತೆಯ ಅಪಾರ್ಟ್ ಮೆಂಟ್ ವೊಂದರಲ್ಲಿ ಮುನಿರಾಜು ಎಂಬುವರ ಕಾರು ಕಳ್ಳತನಕ್ಕೆ ಯತ್ನಿಸಿದ ಆರೋಪದಡಿ ಸಲ್ಮಾನ್ ಮತ್ತು ಮೆಹಬೂಬ್ ನವಾಜ್ ಎಂಬುವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕಳೆದ ಫೆಬ್ರವರಿ 27ರಂದು ಪಲ್ಸರ್ ಬೈಕ್ನಲ್ಲಿ ಈ ಇಬ್ಬರು ಖದೀಮರು, ಸೆಲ್ಲಾರ್ನಲ್ಲಿ ಪಾರ್ಕ್ ಮಾಡಿದ್ದ ಹೈ-ಫೈ ಕಾರಿನ ಗಾಜು ಒಡೆದು ಸ್ಟೇರಿಂಗ್ ಬಾಕ್ಸ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದರು. ಈ ವೇಳೆ ಕಾರು ಮಾಲೀಕ ಮುನಿರಾಜು ನೋಡಿ ಅಲ್ಲೇ ಅವಿತುಕೊಂಡು ಕೂಗಾಡಿದ್ದಾರೆ. ಇದನ್ನು ಗಮನಿಸಿದ ಖದೀಮರು ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದರು.
ಮುನಿರಾಜು ಅವರ ಕೂಗಾಟ ಕಂಡು ಸಹಾಯಕ್ಕೆ ಸ್ಥಳೀಯರು ಬಂದಿದ್ದಾರೆ. ಇದರಿಂದ ಆತಂಕಗೊಂಡ ಖದೀಮರು ಸ್ಥಳೀಯರನ್ನ ನೋಡಿ ಬೈಕ್ ಬಿಟ್ಟು ಎಸ್ಕೇಪ್ ಆಗಲು ಯತ್ನಿಸಿದ್ದರು. ಆದರೆ ಅಯತಪ್ಪಿ ಬಿದ್ದು ಜನರ ಕೈಗೆ ತಗಲಾಕಿಕೊಂಡಿದ್ದಾರೆ. ಸಲ್ಮಾನ್ ವಿರುದ್ಧ ಕೊಲೆ, ಕೊಲೆಯತ್ನ, ಕಿಡ್ನಾಪ್, ರಾಬರಿ ಪ್ರಕರಣ ಸೇರಿದಂತೆ 11 ಪ್ರಕರಣ ದಾಖಲಾಗಿವೆ. ಮತ್ತೋರ್ವ ಆರೋಪಿಯು ಮೆಹಬೂಬ್ ಭಾರತಿನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ.
ಐಫೋನ್ ಕಳ್ಳರ ಬಂಧನ : ಐಫೋನ್ ಮುಂತಾದ ಬೆಲೆ ಬಾಳುವ ಮೊಬೈಲ್ ಬಳಕೆದಾರರನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪಶ್ಚಿಮ ವಿಭಾಗದ ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಒಂದು ಲಕ್ಷ ಮೌಲ್ಯದ ಐಫೋನ್ ಮತ್ತು ಮಾರಕಾಸ್ತ್ರ ವಶಕ್ಕೆ ಪಡೆಯಲಾಗಿದೆ.
ರಸ್ತೆ ಬದಿ ಐಫೋನ್ ಹಿಡಿದುಕೊಂಡು ಹೋಗುವವರನ್ನು ಆರೋಪಿಗಳು ಟಾರ್ಗೆಟ್ ಮಾಡುತ್ತಿದ್ದರು. ಐಫೋನ್ ಸೇರಿದಂತೆ ಬೆಲೆ ಬಾಳುವ ಮೊಬೈಲ್ ಗಳನ್ನು ಕಿತ್ತು ಆರೋಪಿಗಳು ಎಸ್ಕೇಪ್ ಆಗುತ್ತಿದ್ದರು. ಸಿಲಿಕಾನ್ ಸಿಟಿಯ ಎಸ್.ಆರ್.ನಗರ, ಬನಶಂಕರಿ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಕೈಚಳಕ ತೋರಿಸಿದ್ದರು ಎಂದು ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.
ಫೆಬ್ರವರಿ 25 ರಂದು ಬೆಳಗ್ಗೆ 8 ಗಂಟೆಯ ಸಮಯದಲ್ಲಿ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗೆ ಹೋಗಲು ರಸ್ತೆ ಬದಿ ನಿಂತುಕೊಂಡು ತಮ್ಮ ಐ ಫೋನ್ ನಲ್ಲಿ ಬೌನ್ಸ್ ಗಾಡಿಯನ್ನು ವ್ಯಕ್ತಿಯೊಬ್ಬರು ಬುಕ್ ಮಾಡುತ್ತಿರಬೇಕಾದರೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಚಾಕು ತೋರಿಸಿ ಹಲ್ಲೆ ಮಾಡಿ ಐ ಫೋನ್ ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಈ ಕುರಿತು ದೂರು ದಾಖಲಾಗಿತ್ತು ಎಂದಿದ್ದಾರೆ.
ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದೆವು. ಕೆಂಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಸಂತ್ ಮತ್ತು ಸಿಬ್ಬಂದಿ ಮಂಗಳವಾರ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ನೀಡಿದ ಮಾಹಿತಿಯಂತೆ 1 ಲಕ್ಷ ರೂ. ಬೆಲೆ ಬಾಳುವ ಐ-ಫೋನ್ ಸೇರಿದಂತೆ 11 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.