ಬೆಂಗಳೂರು : ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ತಮ್ಮ ಬೆಂಬಲಿಗರೊಂದಿಗೆ ಇಂದು ಅಧಿಕೃತವಾಗಿ ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷದ ಧ್ವಜ ನೀಡುವ ಮೂಲಕ ಅವರನ್ನು ಸ್ವಾಗತಿಸಿದರು. ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹಾಗೂ ಪಕ್ಷಕ್ಕೆ ತಿಂಗಳುಗಳ ಹಿಂದೆ ರಾಜೀನಾಮೆ ಸಲ್ಲಿಸಿದ್ದ ರಮೇಶ್ ಬಾಬು, ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಐವರು ಬೆಂಬಲಿಗರ ಜತೆ ಕೈ ಪಕ್ಷ ಹಿಡಿದಿದ್ದಾರೆ.
ರಮೇಶ್ ಬಾಬು ಜೊತೆ ಜೆಡಿಎಸ್ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಎನ್ ಎಂ, ಜೆಡಿಎಸ್ ಮುಖಂಡ ಹಾಗೂ ಕೋಲಾರ ಕಾನೂನು ವಿಭಾಗದ ಮಾಜಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಎನ್ ಡಿ, ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಟಿ ಎನ್, ಪೂರ್ಣಿಮಾ, ಕೋಲಾರ ಜಿಲ್ಲಾ ರಾಜ್ಯ ಜೆಡಿಎಸ್ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ನಾಗಭೂಷಣ್ ವಿ. ಸೇರ್ಪಡೆಯಾದರು.
ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಮಾತನಾಡಿ, ಸಿದ್ದರಾಮಯ್ಯನವರು ಜನತಾದಳ ರಾಜ್ಯಾಧ್ಯಕ್ಷರಾಗಿದ್ದರು. ಆಗ ನನ್ನನ್ನು ಪ್ರಧಾನ ಕಾರ್ಯದರ್ಶಿ ಮಾಡಿದ್ದರು. ದೇಶದ ಎಲ್ಲಾ ಪಕ್ಷಗಳು ಕಾಂಗ್ರೆಸ್ ಪಕ್ಷದ ಅಂಗ ಪಕ್ಷಗಳು. ಚಳವಳಿ ರೂಪದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ನಾನು ಸೇರ್ಪಡೆಯಾಗಿದ್ದೇನೆ. ರಾಜ್ಯ ಹಾಗೂ ದೇಶಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯ. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, 60 ಹಿರಿಯ ನಾಯಕರು ಪಕ್ಷಕ್ಕೆ ಸೇರುತ್ತೇವೆ ಎಂದು ಅರ್ಜಿ ಹಾಕಿದ್ದಾರೆ. ಇದಕ್ಕಾಗಿಯೇ ಒಂದು ಸಮಿತಿ ರಚನೆ ಮಾಡಿದ್ದೇವೆ. ಸಮಿತಿ ಮುಂದೆ ಅರ್ಜಿ ಬಂದಿವೆ. ಎಲ್ಲವೂ ಪರಿಶೀಲನೆ ಮಾಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದರು.
ರಮೇಶ್ ಬಾಬು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆಂದು ಅರ್ಜಿ ಹಾಕಿದ್ದರು. ಸದ್ಯ ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿರುವುದರಿಂದ ರಮೇಶ್ ಬಾಬು ಕಾಂಗ್ರೆಸ್ ಸೇರ್ಪಡೆಗೆ ಒಪ್ಪಿಕೊಂಡೆವು. ಹೀಗಾಗಿ, ಇವತ್ತು ಅಧಿಕೃತವಾಗಿ ರಮೇಶ್ ಬಾಬು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಅನೇಕ ಪಕ್ಷಗಳಿಗೆ ಕಾಂಗ್ರೆಸ್ ಪಕ್ಷವೇ ಮೂಲ. ಬಿಜೆಪಿ, ಜೆಡಿಎಸ್ ಕಮ್ಯುನಿಸ್ಟ್ ಪಕ್ಷಗಳು ಸೇರಿ, ಇತರ ಪಕ್ಷಗಳಿಗೆ ಕಾಂಗ್ರೆಸ್ ಮೂಲ. ಕಾಂಗ್ರೆಸ್ ಒಂದು ರೀತಿ ತಾಯಿ ಪಕ್ಷ ಇದ್ದಂತೆ. ನಾನು ಆರು ವರ್ಷ ಜೆಡಿಎಸ್ ಅಧ್ಯಕ್ಷನಾಗಿದ್ದೆ. ಆಗಿನಿಂದಲೂ ರಮೇಶಬಾಬು ಕ್ರಿಯಾಶೀಲ ನಾಯಕರಾಗಿದ್ದರು. ಕಾಂಗ್ರೆಸ್ ಅಂದ್ರೆ ಒಂದು ಪಕ್ಷ ಅಲ್ಲ. ಚಳವಳಿ ಇದ್ದಂತೆ. ಬಹಳ ಜನ ನಾಯಕರು ಕಾಂಗ್ರೆಸ್ನಿಂದ ಅನ್ಯ ಪಕ್ಷಗಳಿಗೆ ಹೋಗಿದ್ದಾರೆ. ಹೆಚ್ ಡಿ ದೇವೇಗೌಡ ಕೂಡ ಕಾಂಗ್ರೆಸ್ನಲ್ಲಿದ್ದವರು. ರಾಮಕೃಷ್ಣ ಹೆಗಡೆ ಕೂಡ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರು.
ಕೇವಲ ಅಧಿಕಾರಕ್ಕಾಗಿ ಹೋರಾಟ ಮಾಡಿಲ್ಲ. ಸಮಾಜದಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಹೋರಾಡುತ್ತದೆ. ಕ್ರಾಂತಿಕಾರಿ ಹಾಗೂ ಮಹಾನ್ ನಾಯಕರು ಕಾಂಗ್ರೆಸ್ ಪಕ್ಷದಲ್ಲೇ ಹುಟ್ಟಿದವರು. ಇದು ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ. ಸಮಾನತೆಯ ವ್ಯವಸ್ಥೆ ನಿರ್ಮಾಣ ಮಾಡುವುದು ಕಾಂಗ್ರೆಸ್ ಧ್ಯೇಯ. ಜೆಡಿಎಸ್ ಅವಕಾಶವಾದಿ ಪಕ್ಷ, ಸ್ವಾರ್ಥ ಇರುವವರು ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದ್ರೂ ಹೋಗುತ್ತಾರೆ. ಬಿಜೆಪಿ, ಆರ್ ಎಸ್ಎಸ್ ಜೊತೆ ಕೂಡ ಸೇರಿಕೊಳ್ಳಬಹುದು ಎಂದು ಕುಟುಕಿದರು.