ಬೆಂಗಳೂರು: ರಾಜ್ಯ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಆಪ್ತ ಮೋಹನ್ ಲಿಂಬಿಕಾಯಿ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಇಂದು ಸಂಜೆಯೇ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಮೋಹನ್ ಲಿಂಬಿಕಾಯಿ ಇಂದು ಬೆಳಗ್ಗೆ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸಹಾಯಕರ ಮೂಲಕ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಗೆ ರಾಜೀನಾಮೆ ಪತ್ರ ತಲುಪಿಸಿದ ಲಿಂಬಿಕಾಯಿ, ಇಂದು ಸಂಜೆ 4.30ಕ್ಕೆ ಬೆಳಗಾವಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಬಿಜೆಪಿ ತ್ಯಜಿಸಿ ಕೆಜೆಪಿ ಕಟ್ಟಿದಾಗ ಮೊದಲನೆಯದಾಗಿ ರಾಜೀನಾಮೆ ಸಲ್ಲಿಸಿದ್ದು ಮೋಹನ್ ಲಿಂಬಿಕಾಯಿ ಅವರಾಗಿದ್ದರು. ಅಂದು ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಬಿಎಸ್ವೈ ಹಿಂದೆ ಸಾಗಿದ್ದರು. ಹುಬ್ಬಳ್ಳಿ - ಧಾರವಾಡ ಪಶ್ಚಿಮ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ನಂತರ ಯಡಿಯೂರಪ್ಪ ಪಕ್ಷಕ್ಕೆ ಮರಳಿದ ನಂತರ ಅವರ ಹಿಂದೆಯೇ ಲಿಂಬಿಕಾಯಿ ಕೂಡ ಬಿಜೆಪಿಗೆ ವಾಪಸ್ ಆಗಿದ್ದರು. ಅಲ್ಲದೇ, ಮೈತ್ರಿ ಸರ್ಕಾರ ಪತನಗೊಂಡ 2019ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದ್ದರು.
ಇದನ್ನು ಓದಿ: ಸೋಮಣ್ಣ ವಿಚಾರದಲ್ಲಿ ಗೊಂದಲವಿಲ್ಲ, ಯಾರನ್ನೂ ಕಡೆಗಣಿಸುವ ಪ್ರಶ್ನೆ ಇಲ್ಲ: ಯಡಿಯೂರಪ್ಪ
ಇದೀಗ ಬಿಜೆಪಿಗೆ ಗುಡ್ ಬೈ ಹೇಳಿರುವ ಲಿಂಬಿಕಾಯಿ, ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಲು ಎರಡು ಸುತ್ತಿನ ಮಾತುಕತೆ ನಡೆದಿದೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ಟಿಕೆಟ್ ಫೈನಲ್ ಮಾಡಲಾಗಿದೆ. ಆ ಆಶ್ವಾಸನೆ ಮೇಲೆ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಅರವಿಂದ್ ಬೆಲ್ಲದ್ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಲಿಂಬಿಕಾಯಿಗೆ ಕಾಂಗ್ರೆಸ್ ಆಫರ್ ನೀಡಿದೆ ಎನ್ನಲಾಗಿದೆ.
ಈಗಾಗಲೇ ಕಾಂಗ್ರೆಸ್ ನಾಯಕರೂ ಕೂಡ ಟಿಕೆಟ್ ನೀಡಲು ಸಮ್ಮತಿಸಿರುವುದರಿಂದ ಪಂಚಮಸಾಲಿ ಸಮುದಾಯದ ನಾಯಕನಾಗಿರುವ ಮೋಹನ್ ಲಿಂಬಿಕಾಯಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿದ್ದ ಪರಿಷತ್ ಸದಸ್ಯ ಪುಟ್ಟಣ್ಣ ಕಾಂಗ್ರೆಸ್ ಸೇರುವ ನಿರ್ಧಾರ ಪ್ರಕಟಿಸಿದ್ದಾರೆ. ಯಾರೂ ಬಿಜೆಪಿ ಬಿಡಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಿದ್ದರೂ ಯು.ಬಿ ಬಣಕಾರ್, ಪಟ್ಟಣ್ಣ ಬಿಜೆಪಿ ತೊರೆದಿದ್ದು ಇದೀಗ ಅವರ ಸಾಲಿಗೆ ಮೋಹನ್ ಲಿಂಬಿಕಾಯಿ ಕೂಡಾ ಸೇರ್ಪಡೆಯಾದಂತಾಗಿದೆ.
ಅಷ್ಟೇ ಅಲ್ಲ ಇನ್ನೂ ಕೆಲವರು ಕಾಂಗ್ರೆಸ್ಗೆ ಬರಲಿದ್ದಾರೆ ಎಂದು ಆಗಾಗ ಕೆಪಿಸಿಸಿ ಅಧ್ಯಕ್ಷರು ಹೇಳುತ್ತಿದ್ದರು. ಸಂದರ್ಭ ಬಂದಾಗ ಎಲ್ಲ ನಿಮಗೆ ಗೊತ್ತಾಗಲಿದೆ ಎಂಬ ಬಾಂಬ್ಗಳನ್ನೂ ಹಲವು ಬಾರಿ ಡಿ ಕೆ ಶಿವಕುಮಾರ್ ಸಿಡಿಸಿದ್ದರು. ಅದರಂತೆ ಈಗ ಮೋಹನ್ ಲಿಂಬಿಕಾಯಿ ಕೈ ಹಿಡಿದಿದ್ದು, ಈ ಹಿಂದೆ ಸಿಎಂ ರೇಸ್ನಲ್ಲಿದ್ದ ಅರವಿಂದ್ ಬೆಲ್ಲದ ವಿರುದ್ಧ ಸ್ಪರ್ಧಿಸಲು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಸೋಮಣ್ಣ ಮತ್ತು ಯಡಿಯೂರಪ್ಪ ಅವರದ್ದು ತಂದೆ-ಮಗನ ಸಂಬಂಧ: ಸಿಎಂ ಬೊಮ್ಮಾಯಿ