ಬೆಂಗಳೂರು: ಆಪರೇಷನ್ ಆಗೋದಿಕ್ಕೆ ನನಗೆ ಕ್ಯಾನ್ಸರ್ ಆಗಿಲ್ಲ, ಯಾವುದೇ ಗಡ್ಡೆಯೂ ಬಂದಿಲ್ಲ, ನಾನು ಆಪರೇಷನ್ ಆಗುವ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ ಎಂದು ಆಪರೇಷನ್ ಹಸ್ತದ ಆರೋಪವನ್ನು ಸುರಪುರ ಮಾಜಿ ಶಾಸಕ ರಾಜುಗೌಡ ತಳ್ಳಿ ಹಾಕಿದರು.
ಕುಮಾರಕೃಪಾ ಅತಿಥಿಗೃಹದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಬರ್ತ್ ಡೇ ಪಾರ್ಟಿಯಲ್ಲಿ ಗೌಪ್ಯ ಮಾತುಕತೆ ನಡೆದಿಲ್ಲ. ನಿನ್ನೆ ಸಹಜವಾಗಿ ಪಾರ್ಟಿಗೆ ಬಂದಿದ್ದಾಗ ಭೇಟಿ ಮಾಡಿದ್ದೇವೆ. ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ನನಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿಲ್ಲ, ಯಾರೂ ಸಂಪರ್ಕಿಸಿಲ್ಲ. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ, ಪಕ್ಷ ನನಗೆ ಎಲ್ಲ ಕೊಟ್ಟಿದೆ, ಪಕ್ಷ ಅಧಿಕಾರದಲ್ಲಿ ಇರುವಾಗವಷ್ಟೇ ಅಲ್ಲ, ಅಧಿಕಾರದಲ್ಲಿ ಇಲ್ಲದಿದ್ದರೂ ನಾವು ಪಕ್ಷದ ಜೊತೆಗಿರಬೇಕು ಎಂದರು.
ರಾಯಚೂರು ಲೋಕಸಭೆ ಕ್ಷೇತ್ರದಿಂದ ರಾಜುಗೌಡ ಸ್ಪರ್ಧೆ ಮಾಡುತ್ತಾರೆಂಬ ಸುದ್ದಿ ಹಬ್ಬಿರುವ ಕುರಿತು ಪ್ರತಿಕ್ರಿಯೆ ನೀಡಿದ ರಾಜುಗೌಡ, ರಾಯಚೂರು ಕ್ಷೇತ್ರದಲ್ಲಿ ನಮ್ಮ ಎಂಪಿ ರಾಜಾ ಅಮರೇಶ್ವರ ನಾಯ್ಕ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಬಾರಿಯೂ ಅವರೇ ಅಭ್ಯರ್ಥಿ ಆಗಲಿ ಅಂತ ಕೇಳಿದ್ದೇವೆ. ನಾವೆಲ್ಲ ಅವರ ಪರ ಕೆಲಸ ಮಾಡುತ್ತೇವೆ. ರಾಯಚೂರು ಕ್ಷೇತ್ರದಿಂದ ನನ್ನ ಹೆಸರೂ ಚರ್ಚೆಯಲ್ಲಿದೆ. ಆದರೆ ನಮ್ಮ ಹಾಲಿ ಸಂಸದರಿಗೇ ಟಿಕೆಟ್ ಕೊಡಲಿ ಎಂದು ತಿಳಿಸಿದರು.
ಒಂದು ವೇಳೆ ನಿಮಗೆ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ಇನ್ನೂ ಸಮಯ ಇದೆ, ಮುಂದೆ ನೋಡೋಣ, ಈಗಲೇ ಅದರ ಬಗ್ಗೆ ಚರ್ಚೆ ಯಾಕೆ? ಎಂದು ಉತ್ತರಿಸಿದರು.
ಇದನ್ನೂ ಓದಿ: ಬಿ ಎಲ್ ಸಂತೋಷ್ ಸಂಪರ್ಕದಲ್ಲಿ 40 ಕಾಂಗ್ರೆಸ್ ನಾಯಕರು: ರಿವರ್ಸ್ ಆಪರೇಷನ್ ಸುಳಿವು ನೀಡಿದ ಬಿಜೆಪಿ!
ಬರ್ತ್ ಡೇ ಪಾರ್ಟಿಯಲ್ಲಿ ಡಿಸಿಎಂ ಡಿಕೆಶಿ ಜೊತೆ ಮಾಜಿ ಶಾಸಕ ರಾಜುಗೌಡ ಮತ್ತು ಮಾಜಿ ಸಚಿವ ಬಿ.ಸಿ.ಪಾಟೀಲ್ ಕುಳಿತು ಮಾತನಾಡಿರುವ ಫೋಟೋ ಹರಿದಾಡುತ್ತಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಆಪರೇಷನ್ ಹಸ್ತದ ಕುರಿತು ಈಗಾಗಲೇ ರಾಜ್ಯದಲ್ಲಿ ಚರ್ಚೆಗಳು ಆರಂಭವಾಗಿರುವ ಮಧ್ಯೆ ಈ ಮೂವರು ನಾಯಕರು ಒಟ್ಟಿಗೆ ಕುಳಿತು ಮಾತನಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜುಗೌಡ ಸ್ಪಷ್ಟನೆ ನೀಡಿ, ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಈ ಮೊದಲು ಮಾಜಿ ಸಚಿವರಾದ ಎಸ್ಟಿ ಸೋಮಶೇಖರ್, ಬೈರತಿ ಬಸವರಾಜ್, ಶಿವರಾಂ ಹೆಬ್ಬಾರ್ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಸುದ್ದಿಯಾಗಿತ್ತು. ಆ ಬಳಿಕ ಅವರು ಪ್ರತಿಕ್ರಿಯೆ ನೀಡಿ, ಬಿಜೆಪಿಯಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಬಿಜೆಪಿ ಬಿಡುವ ಸ್ಥಿತಿ ಬಂದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆಯೇ ಹೊರತು ಕಾಂಗ್ರೆಸ್ ಸೇರಲ್ಲ: ಬೈರತಿ ಬಸವರಾಜ್