ಬೆಂಗಳೂರು : 'ರೇನ್ ಬೋ ವಾಹಿನಿ'ಯನ್ನು ಮುಚ್ಚುಲು ಹೊರಟಿರುವ ಆಕಾಶವಾಣಿ ಅಪರ ಮಹಾನಿರ್ದೇಶಕ ರಮಾಕಾಂತ್ ಕನ್ನಡ ವಿರೋಧಿ ನಡೆ ಅಸಹನೀಯ ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದ ಸಂಸ್ಕೃತಿಯ ಪ್ರತೀಕವಾಗಿರುವ, ವ್ಯಾಪಾರಿ ಮನೋಧರ್ಮವನ್ನು ಮೀರಿ ಅಪ್ಪಟ ಮನೋರಂಜನೆಗೆ ಹೆಸರಾದ 'ರೇನ್ ಬೋ 101.3 ಎಫ್ಎಂ' ಚಾನೆಲ್ ಅನ್ನು ಹಂತ ಹಂತವಾಗಿ ಮುಚ್ಚುವ ಹುನ್ನಾರ ದಕ್ಷಿಣ ವಲಯದ ಆಕಾಶವಾಣಿ ಮುಖ್ಯಸ್ಥರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿರುವ ರಮಾಕಾಂತ್ ಅವರದ್ದಾಗಿದೆ ಎಂದು ಮಾಜಿ ಸಚಿವರು ಆರೋಪಿಸಿದ್ದಾರೆ.
ಈ ಅಧಿಕಾರಿಯ ಭಾಷಾಂಧತೆ ಹಾಗೂ ಸುದ್ದಿ ಮೂಲದ ಜವಾಬ್ದಾರಿಗಳನ್ನಷ್ಟೇ ಸೇವೆಯುದ್ದಕ್ಕೂ ನಿರ್ವಹಿಸಿ, ಮನೋರಂಜನೆಯ ಕುರಿತಂತೆ ಅವರು ಹೊಂದಿರುವ ಉಪೇಕ್ಷೆ ಇಂತಹ ದುಷ್ಟ ಆಲೋಚನೆಗೆ ಮೂಲವಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ. ಸೇವೆಯುದ್ದಕ್ಕೂ ವಾರ್ತಾ ವಿಭಾಗಗಳಲ್ಲಿ ಕೆಲಸವನ್ನಷ್ಟೇ ಮಾಡಿ ಅನುಭವ ಇರುವ ತಮಗೆ ಮನೋರಂಜನೆ, ಸಂಸ್ಕೃತಿ-ಸೊಗಡಿನ ಮೌಲ್ಯ ತಿಳಿದಿದೆಯೇ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬೆಂಗಳೂರು ರೇನ್ ಬೋ ವಾಹಿನಿ, ಸ್ಥಳೀಯ ಪ್ರತಿಭೆಗಳಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ನಿಮ್ಮ ಪರ್ಯಾಯ ಆಲೋಚನೆ ಮಾರಕವಾಗಿದೆ ಎಂದು ನಿಮಗೆ ಗೊತ್ತಿದೆಯೇ?. ಬೇರೆ ಬೇರೆ ಸ್ಥಳೀಯ ವಾಹಿನಿಗಳ, ಸ್ಥಳೀಯ ಆಲೋಚನೆಗಳುಳ್ಳ ಕಾರ್ಯಕ್ರಮ ರೇನ್ ಬೋ ಚಾನೆಲ್ ಮೂಲಕವೂ ಮರು ಪ್ರಸಾರ ಮಾಡುವ ಆಲೋಚನೆಯಲ್ಲಿರುವ ತರ್ಕವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.
ವಾಹಿನಿಯ ಹೆಚ್ಚುವರಿ ಅಪರ ಮಹಾನಿರ್ದೇಶಕರಾಗಿ ತಮಗೆ ಲಭ್ಯವಿರುವ ವಿವೇಚನಾಧಿಕಾರವನ್ನು ಬಳಸಿಕೊಂಡು ವ್ಯಾಪಾರಿ ಮನೋಧರ್ಮದ ವಾಹಿನಿಗಳ ನಡುವೆ ಉತ್ತಮ ಮನೋರಂಜನೆಯ ಧ್ಯೇಯದೊಂದಿಗೆ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುತ್ತಿರುವ ಹಾಗೂ ಬೆಂಗಳೂರು ನಗರ ಸಂಸ್ಕೃತಿಯ ಪ್ರತೀಕವಾಗಿ ರೂಪುಗೊಳ್ಳುತ್ತಿರುವ ಎಫ್ಎಂ ರೇನ್ ಬೋ 101.3 ಚಾನೆಲ್ ಅನ್ನು ವಿರೂಪಗೊಳಿಸುವ ದುಷ್ಕೃತ್ಯಕ್ಕೆ ಮುಂದಾಗಬಾರದು ಎಂದು ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
ಇದರಲ್ಲಿ ಯಾವುದೇ ಪಾತ್ರವಿರದ ಕೇಂದ್ರ ಸರ್ಕಾರದ ಹೆಸರಿಗೆ ಅನವಶ್ಯಕವಾಗಿ ಮಸಿ ಬಳಿಯುವ ಪ್ರಯತ್ನ ಮಾಡಬಾರದು. ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ, 'ರಮಾಕಾಂತ್ ಗೋ ಬ್ಯಾಕ್ ಚಳವಳಿ' ತಾರಕಕ್ಕೇರುತ್ತದೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರ ಕನ್ನಡಿಗರ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ: ಹೆಚ್ಡಿಕೆ ಕಿಡಿ