ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಯುವತಿಯನ್ನು ಪತ್ತೆ ಮಾಡುವ ಆಸಕ್ತಿಯನ್ನು ರಾಜ್ಯ ಸರ್ಕಾರ ತೋರಿಸುತ್ತಿಲ್ಲ. ಕೂಡಲೇ ಸರ್ಕಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲಿ ಎಂದು ಮಾಜಿ ಸಚಿವೆ ಮೋಟಮ್ಮ ಆಗ್ರಹಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕಿಯರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನತದೃಷ್ಟ ಹೆಣ್ಣು ಮಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. 27 ದಿನಗಳ ಹಿಂದೆ ಪ್ರಕರಣ ಬೆಳಕಿಗೆ ಬಂತು. ಅಂದಿನಿಂದಲೂ ಸುದ್ದಿಯಾಗುತ್ತಿದೆ. ಆದ್ರೆ, ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡಬೇಕಾದ ಸರ್ಕಾರ ಒಂದು ಹೇಳಿಕೆ ಸಹ ಕೊಡ್ತಿಲ್ಲ.
ಸಿಎಂ ಯಡಿಯೂರಪ್ಪ ಮೌನ ವಹಿಸಿದ್ದಾರೆ. ಮಾತೆತ್ತಿದ್ರೆ ರಾಮ ರಾಜ್ಯ ಎಂದು ಹೇಳ್ತಾರೆ. ಆದ್ರೆ, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಎಸ್ಐಟಿ ತನಿಖೆಯಿಂದ ನ್ಯಾಯ ಸಿಗುವ ಸಾಧ್ಯತೆಯಿಲ್ಲ ಇದರಿಂದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ರಮೇಶ್ ಜಾರಕಿಹೊಳಿ ಅಂಡ್ ಟೀಮ್ ಇಂದ ಯಡಿಯೂರಪ್ಪ ಸಿಎಂ ಆದ್ರು. ಅವರಿಗೆ ಕೊಟ್ಟ ಭರವಸೆ ಸಿಎಂ ಈಡೇರಿಸಲಿಲ್ಲ. ಪದೇಪದೆ ಕೇಂದ್ರ ನಾಯಕರನ್ನ ಭೇಟಿ ಮಾಡಿದ್ರು. ಜಾರಕಿಹೊಳಿ ಮತ್ತು ಟೀಂ ಹತ್ತಿಕ್ಕುವ ಕೆಲಸ ಬಿಜೆಪಿ ಮಾಡಿದೆ. ಹೀಗಾಗಿ, ಸಿಡಿ ಹೊರ ತಂದಿದ್ದಾರೆ. ಬಿಜೆಪಿ ಅವರೇ ಸಿಡಿ ಹಿಂದೆ ಇದ್ದಾರೆ ಎಂದು ಆರೋಪಿಸಿದರು.
ಇಂತಹ ವಿಚಾರಗಳು ಶಾಸನ ಸಭೆಯಲ್ಲಿ ಚರ್ಚೆ ಮಾಡಬೇಕಾ? ಹೆಣ್ಣು ಮಕ್ಕಳ ಮೇಲೆ ಇಂತಹ ಆರೋಪ ಮಾಡುವುದು ಸರಿಯಲ್ಲ. ಏಕ ಪತ್ನಿವ್ರತಸ್ಥರೇ ಎಂದು ಸಚಿವರು ಪ್ರಶ್ನೆ ಮಾಡ್ತಾರೆ. ಇವರಿಗೆ ಹೆಣ್ಣು ಮಕ್ಕಳು ಬಗ್ಗೆ ಎಷ್ಟು ಗೌರವ ಇದೆ ಅನ್ನೋದನ್ನ ತೋರಿಸುತ್ತದೆ. ನಮಗೆ ಈ ಪ್ರಕರಣ ಭಾರಿ ಬೇಸರ ತರಿಸಿದೆ.
ನಮ್ಮ ಅಧ್ಯಕ್ಷರ ಕೈವಾಡ ಇದರಲ್ಲಿ ಇಲ್ಲ. ನಮ್ಮ ಅಧ್ಯಕ್ಷರು ಈ ಕೆಲಸ ಮಾಡಬೇಕು ಅಂತ ನಿರ್ಧಾರ ಮಾಡಿದ್ರೆ ಆರೇ ತಿಂಗಳಲ್ಲಿ ಮಾಡ್ತಿದ್ರು. ಇದಕ್ಕೆ ಒಂದೂವರೆ ವರ್ಷ ಬೇಕಿರಲಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ರಚನೆ ಆಗಿದ್ದ ಮಹಿಳೆಯರ ದೌರ್ಜನ್ಯ ಸಮಿತಿ ಮತ್ತೆ ರಚನೆ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡುತ್ತೆ ಎಂದರು.
ಕಾಂಗ್ರೆಸ್ ನಾಯಕರಿಂದ ಯುವತಿ ರಕ್ಷಣೆ ಕೇಳಿದ್ದಾಳೆ. ಪ್ರತಿಪಕ್ಷವಾಗಿ ರಕ್ಷಣೆ ನೀಡುವುದು ನಮ್ಮ ಕರ್ತವ್ಯ. ಶೃಂಗೇರಿ ಸೇರಿ ಹಲವು ಕಡೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು.
ನೋವಿನ ಸಂಗತಿ : ಮಾಜಿ ಸಚಿವೆ ಡಾ. ಜಯಮಾಲ ಮಾತನಾಡಿ, ರಾಜ್ಯದಲ್ಲಿ ಒಬ್ಬ ಹಣ್ಣು ಮಗಳ ಸುತ್ತ ಇದು ನಡಿತಾ ಇದೆ. 27 ದಿನಗಳು ಕಳೆದಿವೆ. ಆ ಹೆಣ್ಣು ಮಗಳ ಪತ್ತೆ ಮಾಡಲು ಆಗಿಲ್ಲ. ಇದು ನೋವಿನ ಸಂಗತಿ. ಹೀಗಾಗಿ, ಇವತ್ತು ನಾವು ಮಾಧ್ಯಮಗಳು ಮುಂದೆ ಬಂದಿದ್ದೇವೆ. ದ್ವಂದ್ವ ಹೇಳಿಕೆಗಳು ಈ ಸಿಡಿ ಪ್ರಕರಣದಲ್ಲಿ ಬರುತ್ತಿವೆ. ಯಾರ್ಯಾದೋ ಕಡೆ ಬೊಟ್ಟು ಹೋಗುತ್ತಿದೆ.
ಗೃಹ ಸಚಿವರಿಗೆ ಮನವಿ ಮಾಡ್ತೇನೆ. ಆ ಹೆಣ್ಣು ಮಗಳು ಮಾತ್ರ ನಿಜ ಹೇಳೋಕೆ ಸಾಧ್ಯ. ಅವರ ತಂದೆ ತಾಯಿ ಏನೋ ಹೇಳಬಹುದು. ಇವತ್ತು ನಮ್ಮ ಅಧ್ಯಕ್ಷರ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಅವರಿಗೂ ಎರಡು ಹೆಣ್ಣು ಮಕ್ಕಳಿದ್ದಾರೆ. ಅವರ್ಯಾಕೆ ಇಂತಹ ನೀಚ ಕೆಲಸಕ್ಕೆ ಮುಂದಾಗ್ತಾರೆ. ಮೊದಲು ಆ ಹುಡುಗಿ ಕರೆದುಕೊಂಡು ಬನ್ನಿ. ಆವಾಗ ಮಾತ್ರ ಸತ್ಯ ಹೊರ ಬರುತ್ತೆ ಎಂದರು.
ಆರೋಪಿ ಪ್ರಭಾವಿ : ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಇಂತಹ ಗೊಂದಲದ ಪ್ರಕರಣ ಈವರೆಗೆ ನೋಡಿಲ್ಲ. ಒಬ್ಬ ಆರೋಪಿ ಪ್ರಭಾವಿ ಇದ್ದಾರೆ. ನನಗೆ ಭದ್ರತೆ ಇಲ್ಲ ಅಂತ ಹೇಳ್ತಾ ಇದ್ದಾಳೆ. ಆಧುನಿಕ ತಂತ್ರಜ್ಞಾನ ಮೂಲಕ ವಿಡಿಯೋ ಕಳುಹಿಸ್ತಾ ಇದ್ದಾರೆ. ಇಷ್ಟೊಂದು ಅಡ್ವಾನ್ಸ್ ಇರುವಾಗ ಪೊಲೀಸ್ ಏನ್ ಮಾಡ್ತಾ ಇದ್ದಾರೆ.
ಅವರನ್ನು ಪತ್ತೆ ಮಾಡೊಕೆ ಸಾದ್ಯವಾಗಲ್ವ? ಒಬ್ಬರು ಆರೋಪ ಮಾಡ್ತಾ ಇದ್ದಾರೆ ಅಂದ್ರೆ, ಅವರ ಬದುಕಿಗೆ ಧಕ್ಕೆಯಾದಾಗ ಮಾತ್ರ ಈ ತರಹ ಹೇಳ್ತಾರೆ. ನನಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ ಅಂತ ಹುಡುಗಿ ಹೇಳ್ತಾಳೆ. ಕೊಲೆ ಮಾಡುವ ಭಯವಿದೆ ಅಂತ ಬಹಿರಂಗವಾಗಿ ಹೇಳ್ತಾ ಇದ್ದಾರೆ. ಇದೊಂದು ನಾಚಿಗೇಡಿನ ಸಂಗತಿ. ಸರ್ಕಾರ ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು. ಇದರಲ್ಲಿ ನಾವು ವಿಫಲವಾಗಿದ್ದೇವೆ ಅಂತ ಎಂದರು.