ಬೆಂಗಳೂರು: ತಂದೆಯ ಕಾರ್ಯ ತಪ್ಪಿಸಿಕೊಂಡಿದ್ದಕ್ಕೆ ಮಾಜಿ ಸಚಿವ ಡಿ ಕೆ ಶಿವಕುಮಾರ್ ಕಣ್ಣೀರು ಹಾಕಿದ್ರೆ ತಪ್ಪೇ ಎಂದು ಮಾಜಿ ಸಚಿವ ಹೆಚ್ ಎಂ ರೇವಣ್ಣ ಪ್ರಶ್ನಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇದು ಬಿಜೆಪಿಯವರು ಮಾಡುತ್ತಿರುವ ನಾಟಕ. ಡಿಕೆಶಿ ಅವರನ್ನು ಇಡಿ ವಿಚಾರಣೆಗೊಳಪಡಿಸಿದೆ. ಡಿಕೆಶಿ ಕಣ್ಣೀರನ್ನೇ ಬಿಜೆಪಿಯವರು ಕಿಂಡಲ್ ಮಾಡ್ತಿದ್ದಾರೆ ಎಂದರು. ಉಪಮುಖ್ಯಮಂತ್ರಿಗಳೇ ಇಲ್ಲಸಲ್ಲದ ಹೇಳಿಕೆ ನೀಡ್ತಾರೆ. ಮಾತನಾಡುವ ಮೊದಲು ನೋಡಿಕೊಂಡು ಮಾತನಾಡಲಿ ಎಂದರು. ಡಿಕೆಶಿ ವಿಚಾರಣೆ ದಿಲ್ಲಿಯಲ್ಲಿ ನಡೆಯುತ್ತಿದೆ. ಅವರಿಗೆ ನ್ಯಾಯ ಸಿಗಲಿದೆ. ನಾವೆಲ್ಲರೂ ಅವರ ಪರವಾಗಿ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದರು.
ರಾಷ್ಟ್ರದ ಜಿಡಿಪಿ ದರ ಕುಸಿತವಾಗಿದೆ. ಇದನ್ನು ನೋಡಿದಾಗ ನಮಗೂ ಆತಂಕ ಪ್ರಾರಂಭವಾಗಿದೆ. ನೋಟ್ ಬ್ಯಾನ್ನಿಂದಾಗಿ ದೇಶದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಸಮಯದಲ್ಲಿ ನಾವು ಸಾಕಷ್ಟು ಆರೋಪ ಮಾಡಿದ್ದೆವು. ಆದರೆ, ಕೇಳುವ ಸ್ಥಿತಿಯಲ್ಲಿ ಜನರಿರರಲಿಲ್ಲ. ಜನರಿಗೆ ಈಗ ಅದರ ಅರಿವಾಗತೊಡಗಿದೆ. ಆರ್ಥಿಕ ಕುಸಿತದ ಬಗ್ಗೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸಲಹೆ ನೀಡಿದ್ದಾರೆ ಎಂದರು.
ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ತಿದ್ದಾರೆ. ಪ್ರಧಾನಿ ಮೋದಿ ಈಗಲಾದರೂ ಗಮನಹರಿಸಲಿ. ಭಾವನಾತ್ಮಕವಾಗಿ ದೇಶಕಟ್ಟೋಕೆ ಸಾಧ್ಯವಿಲ್ಲ. ಹೆಚ್ಚುದಿನ ಯಾವುದೂ ನಡೆಯಲ್ಲ. ಇದನ್ನ ಪ್ರಧಾನಿ ಮೋದಿ ಅರಿತುಕೊಳ್ಳಬೇಕು ಎಂದು ಹೇಳಿದರು. ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಗಮನಕೊಡಬೇಕು. ದೇವರು ದಿಂಡಿರ ಹೆಸರಿನಲ್ಲಿ ಮತ ಕೇಳೋದು ಬಿಡಬೇಕು. ಐಟಿ, ಇಡಿಯಂತಹ ಸ್ವಾಯತ್ತ ಸಂಸ್ಥೆಗಳನ್ನೂ ದುರುಪಯೋಗ ಮಾಡಿಕೊಳ್ಳವುದನ್ನು ನಿಲ್ಲಿಸಲಿ ಎಂದರು.